ಜಿಲ್ಲೆ

ಜಮೀನುಗಳಿಗೆ ನುಗ್ಗಿದ ಅರ್ಕಾವತಿ ನದಿ ನೀರು

ರಾಮನಗರ: ಮಂಚನಬೆಲೆ ಜಲಾಶಯ ತುಂಬಿದ ಪರಿಣಾಮ ಮಂಗಳವಾರ ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಅರ್ಕಾವತಿ ನದಿಯಲ್ಲಿ ಸುಮಾರು 4 ಸಾವಿರ ಕ್ಯೂಸೆಕ್ ನೀರು ತುಂಬಿ ಹರಿಯಿತು.

ನದಿಯಲ್ಲಿ ಹೆಚ್ಚಿನ ನೀರು ಹರಿವಿನಿಂದ ಅರ್ಕಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಕಂ ಬ್ರಿಡ್ಜ್‌ಗಳ ಮೇಲೆ ನೀರು ಹರಿಯಿತು. ಸುಗ್ಗನಹಳ್ಳಿ ಬಳಿಯ ಹಾಗಲಹಳ್ಳಿ, ಹರೀಸಂದ್ರ, ಹುಣಸನಹಳ್ಳಿ, ಕೃಷ್ಣಾಪುರದೊಡ್ಡಿ, ಕೈಲಾಂಚ ಮತ್ತಿತರ ಗ್ರಾಮಗಳ ನದಿ ಅಕ್ಕಪಕ್ಕದ ರೈತರ ತೆಂಗು, ಅಡಕೆ ತೋಟ, ಭತ್ತ, ರಾಗಿ ಬೆಳೆ ಜಮೀನುಗಳಿಗೆ ನೀರು ನುಗ್ಗಿ ಜಲಾವೃತವಾದವು.

ವಾಹನ ಓಡಾಟ ಇರಲಿಲ್ಲ: ಹರೀಸಂದ್ರ ಸೇತುವೆ ಕಳೆದ ಭಾರಿಯೇ ಒಂದು ಭಾಗ ಕೊಚ್ಚಿಹೋಗಿ ತಾತ್ಕಾಲಿಕವಾಗಿ ದುರಸ್ಥಿಪಡಿಸಿಕೊಂಡು ಓಡಾಟ ನಡೆಸುತ್ತಿದ್ದ ಸೇತುವೆ ಭಾಗವೂ ಹಾನಿಯಾಗಿ ವಾಹನಗಳ ಓಡಾಟಕ್ಕೆ ತೊಂದರೆ ಉಂಟಾಗಿತ್ತು. ಹುಣಸನಹಳ್ಳಿ, ಕೂನಗಲ್ ಸೇತುವೆ ಮೇಲೆ ಹೆಚ್ಚಿನ ನೀರು ಹರಿದ ಪರಿಣಾಮ ಸಂಪೂರ್ಣ ಸಂಪರ್ಕ ಕಡಿತಗೊಂಡಿದೆ. ಬುಧವಾರ ನೀರಿನ ಹರಿವು ಕೊಂಚ ತಗ್ಗಿದ್ದರೂ ಓಡಾಟ ಸಾಧ್ಯವಾಗಿಲ್ಲ. ಸೇತುವೆ ಮೇಲೆ ಇನ್ನೂ ನೀರು ಹರಿಯುತ್ತಿದೆ.

ಜೊಂಡು ತೆರವು: ಮದರ್‌ಸಾಬರದೊಡ್ಡಿ ಸೇತುವೆ ಒಳಭಾಗದಲ್ಲಿ ಕಸಕಡ್ಡಿ ಜೊಂಡು ಸೇರಿ ಸೇತುವೆಗೆ ಹಾನಿಯಾಗುವ ಲಕ್ಷಣ ಕಾಣುತ್ತಿತ್ತು. ಕೂಡಲೇ ಮದರ್‌ಸಾಬರದೊಡ್ಡಿ ಡೇರಿ ಅಧ್ಯಕ್ಷ ರವಿ ಮತ್ತು ಗ್ರಾಮಸ್ಥರು ಜೆಸಿಬಿ ಮುಖಾಂತರ ಜೊಂಡು ಕಸ ಕಡ್ಡಿ ತೆಗೆದು ನೀರಿನ ಸರಾಗ ಹರಿವಿಗೆ ಮುಂದಾದರು.

ಹಾನಿ ಇಲ್ಲ: ನದಿ ನೀರು ಅಕ್ಕಪಕ್ಕದ ಜಮೀನಿಗೆ ನುಗ್ಗಿದ ಪರಿಣಾಮ ತೆಂಗು, ಅಡಕೆ ತೋಟ ಭತ್ತ, ರಾಗಿ ಬೆಳೆಗಳು ಹಾನಿಯಾಗಿಲ್ಲ. ಅಂತಹ ಯಾವುದೇ ವರದಿ ಬಂದಿಲ್ಲ ಎನ್ನುತ್ತಾರೆ ತಾಲೂಕಿನ ತೋಟಗಾರಿಕೆ ಮತ್ತು ಕೃಷಿ ಅಧಿಕಾರಿಗಳು.

ಮುನ್ನೆಚ್ಚರಿಕೆ: ರಾಮನಗರದ ಬಾಲಗೇರಿ ಬಳಿಯಲ್ಲಿ ನದಿಯಂಚಿನ ಏಳೆಂಟು ಮನೆಗಳ ಸಮೀಪ ನದಿ ನೀರು ಹರಿದಿತ್ತು. ತಕ್ಷಣವೇ ನಗರಸಭೆ ಪೌರಾಯುಕ್ತ ಡಾ. ಜಯಣ್ಣ ಮತ್ತು ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಏಳೆಂಟು ಮನೆಗಳಲ್ಲಿ ವಾಸವಾಗಿದ್ದವರನ್ನು ಮುನ್ನೆಚ್ಚರಿಕೆಯಾಗಿ ಬೇರೆಡೆ ಸ್ಥಳಾಂತರಿಸಿದರು.

ತಗ್ಗಿದ ನೀರು: ಮಂಗಳವಾರ ಭಾರಿ ವಿಸ್ತಾರವಾಗಿ ಹರಿಯುತ್ತಿದ್ದ ನೀರು ಬುಧವಾರ ಕೊಂಚ ಪ್ರಮಾಣದಲ್ಲಿ ತಗ್ಗಿದೆ. ಆದರೆ ಮತ್ತೆ ಬೆಂಗಳೂರು ಮೇಲ್ಬಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ನದಿಗೆ ಮತ್ತೆ ನೀರು ಬಿಡಲಾಗುತ್ತದೆ ಎನ್ನಲಾಗಿದೆ.

"ನಗರಸಭೆ 24 ಗಂಟೆಯೂ ನಿಗಾವಹಿಸಿದ್ದು, ಎಲ್ಲ ಸಿದ್ಧತೆ ಕೈಗೊಳ್ಳಲಾಗಿದೆ. ಅಂಬೇಡ್ಕರ್ ಭವನದಲ್ಲಿ ಮುನ್ನೆಚ್ಚರಿಕೆಯಾಗಿ ಗಂಜಿ ಕೇಂದ್ರ ತೆರೆಯಲಾಗಿದೆ. ಜತೆಗೆ ಅಗ್ನಿಶಾಮಕ ದಳವಿದೆ. ಮಂಚನಬೆಲೆ ಅಧಿಕಾರಿಗಳ ಜತೆ ನಗರಸಭೆ ನಿಕಟ ಸಂಪರ್ಕವಿಟ್ಟುಕೊಂಡಿದ್ದು ನದಿಯಲ್ಲಿ ನೀರಿನ ಹರಿವಿನ ಪ್ರತಿ ಸಮಯದಲ್ಲೂ ಮಾಹಿತಿ ಪಡೆಯಲಾಗುತ್ತಿದೆ."

ಡಾ. ಜಯಣ್ಣ, ಆಯುಕ್ತರು, ನಗರಸಭೆ, ರಾಮನಗರ.