ಅರಕಲಗೂಡು: ಒಮ್ಮೆ ಮೀಸಲಾತಿ ಸೌಲಭ್ಯ ಪಡೆದವರು, ಮತ್ತೊಮ್ಮೆ ಮೀಸಲಾತಿಯಿಂದ ವಂಚಿತರಾದವರಿಗೆ ಅವಕಾಶ ನೀಡಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಂ. ಮಹೇಶ್ ಹೇಳಿದರು. ಪಟ್ಟಣದ ಶಿಕ್ಷಕರ ಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ಸೋಮವಾರ ಏರ್ಪಡಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ‘ಅಂಬೇಡ್ಕರ್ ಬದುಕು ಮತ್ತು ವಿಚಾರ’ ಕುರಿತು ಅವರು ಪ್ರಧಾನ ಭಾಷಣ ಮಾಡಿದರು.
ಶಾಸಕ ಎ. ಮಂಜು ಮಾತನಾಡಿ, ಸಮ ಸಮಾಜದ ಕನಸು ಕಂಡು ನನಸಾಗಿಸಿದ ಅಂಬೇಡ್ಕರ್ ಅವರ ತತ್ವ ಮತ್ತು ಸಿದ್ಧಾಂತಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರಿಗೆ ನಾವು ಗೌರವ ಸಲ್ಲಿಸಿದಂತಾಗುತ್ತದೆ ಎಂದರು.
ಪ್ರತಿಭಾ ಪುರಸ್ಕಾರ: ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯು ಹಾಗೂ ಪದವಿ ತರಗತಿಗಳಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಅಂತರ್ಜಾತಿ ವಿವಾಹವಾದವರಿಗೆ ಪ್ರೋತ್ಸಾಹ ಧನದ ಬಾಂಡ್ ವಿತರಿಸಲಾಯಿತು. ಪಪಂ ಅಧ್ಯಕ್ಷ ಪ್ರದೀಪ್ ಕುಮಾರ್, ಸದಸ್ಯರಾದ ಅನಿಕೇತನ್, ಕೃಷ್ಣಯ್ಯ, ಎಚ್.ಎಸ್.ರಶ್ಮಿ, ಹೂವಣ್ಣ, ತಹಸೀಲ್ದಾರ್ ಕೆ.ಸಿ ಸೌಮ್ಯಾ, ತಾಪಂ ಇಒ ಡಿ.ಡಿ ಪ್ರಕಾಶ್, ಇತರರಿದ್ದರು. ತಾಲೂಕು ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಗಣ್ಯರು ಮಾಲಾರ್ಪಣೆ ಮಾಡಿದರು. ಅಂಬೇಡ್ಕರ್ ಭಾವ ಚಿತ್ರವನ್ನು ಬೆಳ್ಳಿ ರಥದಲ್ಲಿ ಇಟ್ಟು ಕಾರ್ಯಕ್ರಮದ ವೇದಿಕೆ ವರೆಗೆ ಮೆರವಣಿಗೆ ನಡೆಸಲಾಯಿತು.