ಹುಬ್ಬಳ್ಳಿ: ಗಾನ ಗಂಧರ್ವ ಪಂ. ಅರ್ಜುನಸಾ ನಾಕೋಡ ಅವರು ನಾಟಕಕಾರರು, ಪೈಲ್ವಾನರು, ಸಂಗೀತಗಾರರೂ ಆಗಿದ್ದರು, ಅನೇಕ ಶಿಷ್ಯವೃಂದವನ್ನು ಹುಟ್ಟು ಹಾಕಿ ಸಂಗೀತ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಇಲ್ಲಿಯ ಸವಾಯಿ ಗಂಧರ್ವ ಹಾಲ್ನಲ್ಲಿ ಭಾನುವಾರ ಗಾನ ಗಂಧರ್ವ ಪಂ. ಅರ್ಜುನಸಾ ನಾಕೋಡ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಕ್ಷಮತಾ ಸೇವಾ ಸಂಸ್ಥೆ ಹಾಗೂ ಸ್ವರ್ಣ ಗ್ರುಪ್ ಆ್ ಕಂಪನಿ ಸಹಯೋಗದಲ್ಲಿ ಏರ್ಪಡಿಸಿದ್ದ ಪಂ. ಅರ್ಜುನಸಾ ನಾಕೋಡ ಸಂಗೀತ ಮಹೋತ್ಸವ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಧುನಿಕ ಅವಸರದ ಜಗತ್ತಿನಲ್ಲಿ ಜನರು ನೆಮ್ಮದಿ ಕಳೆದುಕೊಳ್ಳುತ್ತಿದ್ದಾರೆ. ಒತ್ತಡ, ಡಿಪ್ರೆಶನ್ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಶಾಸ್ತ್ರೀಯ ಸಂಗೀತಕ್ಕೆ ಮನಸ್ಸಿಗೆ ಆನಂದ, ಸಂತೋಷ ನೀಡುವ ಶಕ್ತಿ ಇದೆ. ಇದೇ ಕಾರಣಕ್ಕೆ ಭಾರತೀಯ ಸಂಗೀತ ಹಾಗೂ ಸಂಸತಿಯನ್ನು ಜಗತ್ತು ಸ್ವೀಕಾರ ಮಾಡುತ್ತಿದೆ ಎಂದರು.
ಮುಂದಿನ ಐದು ವರ್ಷಗಳಲ್ಲಿ ಜಗತ್ತಿನ ದೊಡ್ಡ ಆಥಿರ್ಕ ಶಕ್ತಿಯಾಗಿ ಭಾರತ ಬೆಳೆಯಲಿದ್ದು, ಎಲ್ಲ ಕ್ಷೇತ್ರಗಳಲ್ಲಿ ದೊಡ್ಡಣ್ಣನಾಗದೇ ಹಿರಿಯಣ್ಣನಂತೆ ಮಾರ್ಗದರ್ಶನ ಮಾಡಲಿದೆ ಎಂದುರು.
ಸ್ವರ್ಣ ಸಮೂಹ ಸಂಸ್ಥೆಯ ಎಂಡಿ ಡಾ. ವಿ.ಎಸ್.ವಿ. ಪ್ರಸಾದ, ಕ್ಷಮತಾ ಸೇವಾ ಸಂಸ್ಥೆಯ ಸಂಚಾಲಕ ಗೋವಿಂದ ಜೋಶಿ, ಟ್ರಸ್ಟ್ನ ರಂಗಾ ಬದ್ದಿ ಇತರರು ಇದ್ದರು.
ಪಂ. ಬಾಲಚಂದ್ರ ನಾಕೋಡ ಅವರು ಪ್ರಾಸ್ತಾವಿಕ ಮಾತನಾಡಿದರು.