ಜಿಲ್ಲೆ

ಕಾಡಾನೆಗಳಿಂದ ಅರ್ಜುನ ಆನೆ ಸಮಾಧಿ ಧ್ವಂಸ

ರವಿಕುಮಾರ್ ಪಿ. ಕೆ

ಸಕಲೇಶಪುರ: ಅರ್ಜುನ ಆನೆಯ ಸಮಾಧಿಯನ್ನು ಕಾಡಾನೆಗಳು ಗುರುವಾರ ರಾತ್ರಿ ಧ್ವಂಸ ಮಾಡಿವೆ.

ತಾಲೂಕಿನ ದಬ್ಬಳ್ಳಿ ನೀರುಕೊಲ್ಲಿಕಟ್ಟೆ ಸಮೀಪ 13 ದಿನಗಳ ಹಿಂದೆ ಕಾಡಾನೆ ಜತೆಗಿನ ಕಾದಾಟದಲ್ಲಿ ಮೃತಪಟ್ಟ ಅರ್ಜುನ ಆನೆಯನ್ನು ಸ್ಥಳದಲ್ಲೇ ಸಮಾಧಿ ಮಾಡಲಾಗಿತ್ತು. ಗುರುವಾರ 11ನೇ ದಿನದ ಪುಣ್ಯಾರಾಧನೆಯನ್ನು ಯಸಳೂರು ಅರಣ್ಯ ಇಲಾಖೆ ಸಿಬ್ಬಂದಿ ನೆರವೇರಿಸಿದ್ದರು.

ಸಂಜೆವರೆಗೆ ಸಮಾಧಿ ಸ್ಥಳಕ್ಕೆ ಸುತ್ತಲಿನ ಗ್ರಾಮಸ್ಥರು ಆಗಮಿಸಿ ಪೂಜೆ ಸಲ್ಲಿಸಿ ತೆರಳಿದ ನಂತರ ಸಮಾಧಿ ಬಳಿ ಆಗಮಿಸಿದ 6 ರಿಂದ 8 ಕಾಡಾನೆಗಳ ತಂಡ ಸಮಾಧಿ ಸುತ್ತ ಅಳವಡಿಸಿದ್ದ ತಂತಿಬೇಲಿಯನ್ನು ತುಂಡರಿಸಿ ಸಮಾಧಿಯ ಮೇಲಿದ್ದ ಹೂವುಗಳನ್ನು ತಿಂದು ಮಣ್ಣಿನಲ್ಲಿ ಹೊರಳಾಡಿರುವುದರಿಂದ ಇಡೀ ಸಮಾಧಿ ನೆಲಸಮಗೊಂಡಿದೆ.

ಕಣ್ಣೀರಿಟ್ಟ ಮಾವುತ ವಿನು: ಶುಕ್ರವಾರ ಸಮಾಧಿ ಸ್ಥಳಕ್ಕೆ ಪೂಜೆ ಸಲ್ಲಿಸಲು ಆಗಮಿಸಿದ ಮಾವುತ ವಿನು ಅರ್ಜುನ ಆನೆಯನ್ನು ನೆನೆದು ಸಮಾಧಿಯ ಮೇಲೆ ಹೊರಳಾಡಿ ಗೋಳಾಡಿದರು. ಸುಮಾರು ನಾಲ್ಕು ಗಂಟೆಗಳ ಕಾಲ ಸಮಾಧಿ ಸ್ಥಳದಲ್ಲೇ ರೋದಿಸುತ್ತಿದ್ದ ಮಾವುತನನ್ನು ಸ್ಥಳೀಯರು ಸಂತೈಸಿ ಕರೆದೊಯ್ದರು.