ಜಿಲ್ಲೆ

ಯುವವಾಹಿನಿಯಿಂದ ಗುರುಗಳ ಜೀವನ ಸಂದೇಶ ಗೋಷ್ಠಿ

ಸೌಮ್ಯ ಆರ್

ಮೂಡುಬಿದಿರೆ: ಯುವವಾಹಿನಿ ಮೂಡುಬಿದಿರೆ ಘಟಕದ ವತಿಯಿಂದ ಬ್ರಹ್ಮಶ್ರೀ ಗುರುನಾರಾಯಣಸ್ವಾಮಿ ಸೇವಾ ಸಂಘದ ಅಮೃತ ಸಭಾಭವನದಲ್ಲಿ ಶ್ರೀ ನಾರಾಯಣ ಗುರುಗಳ ಜೀವನ ಸಂದೇಶ ಗೋಷ್ಠಿ, ವಿದ್ಯಾರ್ಥಿವೇತನ ವಿತರಣೆ, ಸನ್ಮಾನ ಹಾಗೂ ಯುವಸಿರಿ ಪುರಸ್ಕಾರವನ್ನು ಒಳಗೊಂಡ ಅರಿವು 2025 ಕಾರ್ಯಕ್ರಮ ಭಾನುವಾರ ನಡೆಯಿತು.

ಘಟಕ ಅಧ್ಯಕ್ಷ ಮುರಳೀಧರ ಕೋಟ್ಯಾನ್ ಅಧ್ಯಕ್ಷತೆ ವಹಿಸಿದರು. ಭಾನುಮತಿ ಶೀನಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಆಳ್ವಾಸ್ ಪುನರ್ಜನ್ಮ ಚಿಕಿತ್ಸಾ ಕೇಂದ್ರದ ಆಪ್ತ ಸಮಾಲೋಚಕ ಲೋಹಿತ್ ಕೆ.ಬಂಟ್ವಾಳ ಗುರು ಸಂದೇಶ ನೀಡಿದರು.

ಶಾಸಕ ಉಮಾನಾಥ ಎ.ಕೋಟ್ಯಾನ್, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಲೋಕೇಶ್ ಕೋಟ್ಯಾನ್, ಮಕ್ಕಳ ತಜ್ಞ ಡಾ.ಮುರಳಿಕೃಷ್ಣ ಆರ್.ವಿ., ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ, ವಕೀಲ ಸುರೇಶ್ ಕೆ.ಪೂಜಾರಿ ಮುಖ್ಯ ಅತಿಥಿಗಳಾಗಿದ್ದರು. ಯುವಸ್ಪಂದನ ಸೇವಾ ಯೋಜನೆ ಅಧ್ಯಕ್ಷ ನವಾನಂದ, ತತ್ವ ಪ್ರಚಾರ ನಿರ್ದೇಶಕ ಉಮೇಶ್ ಕೋಟ್ಯಾನ್, ಯುವವಾಹಿನಿ ಕಾರ್ಯದರ್ಶಿ ಅಕ್ಷತಾ ಮಾರೂರು ಉಪಸ್ಥಿತರಿದ್ದರು.

ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ನಾಲ್ವರು ವಿದ್ಯಾರ್ಥಿಗಳಿಗೆ ಪೂರ್ವ ಅಧ್ಯಕ್ಷ ದಿ.ಹರಿಪ್ರಸಾದ್ ಸ್ಮರಣಾರ್ಥ ಪುರಸ್ಕಾರ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಅಧಿಕ ಅಂಕ ಪಡೆದ ಇಬ್ಬರು ವಿದ್ಯಾರ್ಥಿಗಳನ್ನು ಗೌರವಧನ ಸಹಿತ ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕಪಡೆದ 47 ವಿದ್ಯಾರ್ಥಿಗಳಿಗೆ ಗೌರವಧನ ಸಹಿತ ಯುವಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. 33 ಅರ್ಹ ವಿದ್ಯಾರ್ಥಿಗಳಿಗೆ ಒಟ್ಟು 150 ಲಕ್ಷ ರೂ. ಗೌರವಧನ ವಿತರಿಸಲಾಯಿತು. ದಯಾನಂದ ಮತ್ತು ಶಿಭಾನಿ ನಿರೂಪಿಸಿದರು. ಕಾರ್ಯದರ್ಶಿ ವಿನೀತ್ ಸುವರ್ಣ ವಂದಿಸಿದರು.