ಹುಕ್ಕೇರಿ: ಹುಲ್ಲೋಳಿ ಗ್ರಾಮದ ಅರಿಹಂತ ಸೌಹಾರ್ದ ಸಹಕಾರಿ ಸಂಘ ಗ್ರಾಹಕರ ಮತ್ತು ಸದಸ್ಯರ ವಿಶ್ವಾಸಾರ್ಹತೆಗೆ ಕಾರಣವಾಗಿದೆ ಎಂದು ಕೌಲಗುಡ್ಡ-ಹನಮಾಪುರ ಸಿದ್ದಶ್ರೀ ಆಶ್ರಮದ ಅಮರೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ಹುಲ್ಲೋಳಿ ಗ್ರಾಮದ ಅರಿಹಂತ ಸೌಹಾರ್ದ ಸಹಕಾರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ 25ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಸಮಾಜಮುಖಿಯಾಗಿ ಶ್ರಮಿಸುತ್ತಿರುವ ಅರಿಹಂತ ಸಹಕಾರಿಯು ಸಂಘದ ಮೂಲಕ ಶಿಕ್ಷಣ ಸಂಸ್ಥೆಯನ್ನೂ ಮುನ್ನಡೆಸುತ್ತಿದೆ. ಸದಸ್ಯರಿಗೆ ಸಾಲ ನೀಡಿ, ಸಕಾಲದಲ್ಲಿ ಸಾಲ ವಸೂಲಿ ಮಾಡುತ್ತಿರುವುದು ಶ್ಲ್ಲಾಘನೀಯ ಎಂದರು.
ಸಹಕಾರಿ ಅಧ್ಯಕ್ಷ ಭರಮಪ್ಪ ಚೌಗಲಾ ಮತ್ತು ಪ್ರಧಾನ ವ್ಯವಸ್ಥಾಪಕ ಆನಂದ ಚೌಗಲಾ ಮಾತನಾಡಿ, ಪ್ರಧಾನ ಕಚೇರಿ ಸೇರಿ 10 ಶಾಖೆಗಳನ್ನು ಒಳಗೊಂಡಿರುವ ಅರಿಹಂತ ಸಂಘವು 16,597 ಸದಸ್ಯರನ್ನು ಹೊಂದಿದೆ. 1 ಕೋಟಿ ರೂ. ಷೇರು ಬಂಡವಾಳ ಇದ್ದು, 254 ಕೋಟಿ ರೂ. ಠೇವು ಒಳಗೊಂಡಿದೆ. 193 ಕೋಟಿ ರೂ. ಸಾಲ, 280 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ. 2023-24 ನೇ ಆರ್ಥಿಕ ವರ್ಷದಲ್ಲಿ 1,646 ಕೋಟಿ ರೂ. ವಹಿವಾಟು ನಡೆಸಿದ್ದು, 6.66 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.
ನಿರ್ದೇಶಕ ಜಿನ್ನಪ್ಪ ಸಪ್ತಸಾಗರ, ಸಹಕಾರಿ ಸಾಗಿ ಬಂದ ಹಾದಿ ಕುರಿತು ತಿಳಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳು, ಅತಿಥಿಗಳನ್ನು ಸತ್ಕರಿಸಲಾಯಿತು. ಗ್ರಾಪಂ ಅಧ್ಯಕ್ಷ ಕಲ್ಮೇಶ ಅಮ್ಮಣಗಿ, ಉಪಾಧ್ಯಕ್ಷ ಬಾಹುಬಲಿ ನಾಗನೂರಿ, ನಿರ್ದೇಶಕರಾದ ಪಿ.ಆರ್.ಚೌಗಲಾ, ರಾಮಣ್ಣ ಗೋಟೂರಿ, ರವೀಂದ್ರ ಚೌಗಲಾ, ಜಯಪಾಲ ಚೌಗಲಾ, ಜಿನ್ನಪ್ಪ ಸಪ್ತಸಾಗರ, ಬಾಬು ಅಕ್ಕಿವಾಟೆ, ಡಾ.ಶಿವಾಜಿ ಗೋಟೂರೆ. ಈರಣ್ಣ ಹೂಗಾರ, ಸಿದ್ಧಪ್ಪ ಹುಲ್ಲೋಳಿ, ಮಹಾವೀರ ಬಾಳಿಗೇರಿ, ಶ್ರೇಣಿಕ ಹೊಸೂರೆ, ಸಚಿನ ಪಾಟೀಲ, ಸಿಎ ಎಸ್.ಬಿ.ಲಠ್ಠೆ, ಆಂತರಿಕ ಲೆಕ್ಕ ಪರಿಶೋಧಕ ಮಹಾವೀರ ಚೌಗಲಾ ಇತರರಿದ್ದರು. ರವೀಂದ್ರ ಚೌಗಲಾ ಸ್ವಾಗತಿಸಿದರು. ಜಯಪಾಲ ಚೌಗಲಾ ನಿರೂಪಿಸಿದರು. ಶೀತಲ ಬಂಡಿ ವಂದಿಸಿದರು.