ಜಿಲ್ಲೆ

ಆರಿದ್ರಾ ಮಳೆಯಿಂದ ತಂಪಾದ ಇಳೆ

Gadag

ಗಜೇಂದ್ರಗಡ: ಪಟ್ಟಣ ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶನಿವಾರ ಹಾಗೂ ಭಾನುವಾರ ಉತ್ತಮ ಮಳೆಯಾಗಿದೆ. ಅಶ್ವಿನಿ, ಭರಣಿ, ಕೃತಿಕಾ ರೋಹಿಣಿ, ಮೃಗಶಿರಾ ನಕ್ಷತ್ರದ ಮಳೆಗಳು ಸರಿಯಾಗಿ ಆಗಿರಲಿಲ್ಲ. ಹೀಗಾಗಿ, ಕೊಡಗಾನೂರ, ರಾಜೂರು, ವೀರಾಪುರ, ರಾಂಪುರ ಗ್ರಾಮಗಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಮಾಡಲಾಗಿರಲಿಲ್ಲ. ಆದರೆ, ಶನಿವಾರ ಮತ್ತು ಭಾನುವಾರ ಆರಿದ್ರಾ ಮಳೆ ಉತ್ತಮವಾಗಿ ಸುರಿದಿದ್ದರಿಂದ ರೈತರು ಬಿತ್ತನೆಗೆ ತಯಾರಿ ನಡೆಸಿದ್ದಾರೆ.
ಪಟ್ಟಣದ ಜಿ.ಎಸ್. ಪಾಟೀಲ ನಗರದಲ್ಲಿ ಶನಿವಾರ ಚರಂಡಿ ನೀರು ಮನೆಗಳಿಗೆ ನುಗ್ಗಿದೆ. ಅಲ್ಲಿನ ನಿವಾಸಿಗಳು ಮಳೆ ನೀರನ್ನು ಹೊರಹಾಕಲು ರಾತ್ರಿಯಿಡೀ ಹರಸಾಹಸಪಟ್ಟರು. ಕೆಲವು ಮನೆಗಳಲ್ಲಿರುವ ಗೃಹೋಪಯೋಗಿ ವಸ್ತುಗಳು ಹಾಗೂ ದವಸ-ಧಾನ್ಯ ನೀರಲ್ಲಿ ತೋಯ್ದು ಹಾಳಾಗಿವೆ. ಚರಂಡಿಗಳನ್ನು ಸ್ವಚ್ಛ ಮಾಡದೆ ಇದ್ದುದರಿಂದ ಮನೆಗಳಿಗೆ ನೀರು ನುಗ್ಗಿತು ಎಂದು ನಿವಾಸಿಗಳು ಪುರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.