ಚನ್ನರಾಯಪಟ್ಟಣ: ವಾಣಿಜ್ಯ ಸಂಸ್ಥೆಗಳ ಆರ್ಥಿಕತೆ ಹೆಚ್ಚಿಸುವ ಸಲುವಾಗಿ ಉಗ್ರಾಣ ನಿರ್ಮಾಣ ಮಾಡಲಾಗುತ್ತಿದೆ ಎಂದು ಉಗ್ರಾಣ ನಿಗಮದ ಅಧ್ಯಕ್ಷ ಡಿ.ವಿ.ಪ್ರಸಾದ್ ತಿಳಿಸಿದರು.
ಹೋಬಳಿಯ ಭಟ್ಟರಮಾರೇನಹಳ್ಳಿ ಸಮೀಪದ ಕೆಐಎಡಿಬಿಯ ಐಟಿ ಪಾರ್ಕ್‌ನಲ್ಲಿ ಬುಧವಾರ ಕೇಂದ್ರೀಯ ಉಗ್ರಾಣ ನಿಗಮದ ನೂತನ ಉಗ್ರಾಣ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಬೆಂಗಳೂರು ಹೊರವಲಯದಲ್ಲಿರುವ ದೇವನಹಳ್ಳಿಯ ಕೆಐಎಡಿಬಿ ಐಟಿ ಪಾರ್ಕ್‌ನಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಉತ್ಪನ್ನಗಳ ಸಂಗ್ರಹಕ್ಕೆ ಸೂಕ್ತವಾದ ಉಗ್ರಾಣ ನಿರ್ಮಾಣ ಮಾಡುತ್ತಿದ್ದೇವೆ. ಈ ಮೂಲಕ ವಾಣಿಜ್ಯ ಸಂಸ್ಥೆಗಳ ಆರ್ಥಿಕತೆ ಹೆಚ್ಚಿಸಲು ಆ ಸಂಸ್ಥೆಗಳಿಗೆ ಸಹಕಾರ ನೀಡಲಿದ್ದೇವೆ. ಈ ಹೊಸ ಉಗ್ರಾಣವು 14.20 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿದೆ ಎಂದು ತಿಳಿಸಿದರು.
ಮೊದಲ ಹಂತದಲ್ಲಿ ಕೇಂದ್ರೀಯ ಉಗ್ರಾಣ ನಿಗಮ 4.5 ಲಕ್ಷ ಚದರಡಿ ವಿಸ್ತೀರ್ಣ, ಎರಡನೇ ಹಂತದಲ್ಲಿ 8 ಲಕ್ಷ ಚದರಡಿವರೆಗಿನ ಉಗ್ರಾಣ ನಿರ್ಮಾಣ ಮಾಡಲಾಗುವುದು. ಇದು 20 ಮಹಡಿಗಳ ಕಟ್ಟಡವಾಗಲಿದ್ದು, ಇದರಲ್ಲಿ 40,000 ಚದರಡಿ ವಿಸ್ತೀರ್ಣದಲ್ಲಿ ಡೇಟಾ ವೇರ್‌ಹೌಸಿಂಗ್ ಇರಲಿದೆ. ಇದಲ್ಲದೇ, ಲಾಜಿಸ್ಟಿಕ್ ಮತ್ತು ಡೇಟಾ ವೇರ್‌ಹೌಸಿಂಗ್‌ಗೆ ಸಂಬಂಧಿಸಿದ ವಾಣಿಜ್ಯ ಕಚೇರಿಗೆ ಜಾಗ ಇರಲಿದೆ. ಈ ಹೊಸ ಉಗ್ರಾಣದ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ಚಟುವಟಿಕೆಯನ್ನು ಆರಂಭಿಸುವ ವೇಳೆಗೆ ಸುಮಾರು 1000 ಉದ್ಯೋಗ ಸೃಷ್ಟಿಸಲಿದೆ ಎಂದು ತಿಳಿಸಿದರು.
ಸಿಡಬ್ಲ್ಯುಸಿಯ ಮುಖ್ಯಸ್ಥ ಅರುಣ್‌ಕುಮಾರ್ ಶ್ರೀವಾಸ್ತವ್ ಮಾತನಾಡಿ, ಈ ಪ್ರದೇಶದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಉತ್ಪನ್ನ ಸಂಗ್ರಹಣೆಗೆ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಉಗ್ರಾಣ ನಿರ್ಮಾಣ ಮಾಡಲಾಗುತ್ತಿದೆ. ಉಗ್ರಾಣದ ಕಾಮಗಾರಿ 2020ರ ಮಾರ್ಚ್ ವೇಳೆಗೆ ಆರಂಭವಾಗಲಿದ್ದು, ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಕೇಂದ್ರೀಯ ಉಗ್ರಾಣ ನಿಗಮ ಅತ್ಯಾಧುನಿಕವಾದ ಅತಿ ಎತ್ತರದ ಉಗ್ರಾಣ ಸಂಕೀರ್ಣವನ್ನು ನಿರ್ಮಾಣ ಮಾಡಲಿದ್ದು, ಪಕ್ಕದಲ್ಲಿ 12.5 ಮೀಟರ್‌ಎತ್ತರ ಮತ್ತು ಮದ್ಯದಲ್ಲಿ 15 ಮೀಟರ್ ಎತ್ತರವಿರಲಿದೆ. ಇದಲ್ಲದೇ, ಇ-ಕಾಮರ್ಸ್ ಲಾಜಿಸ್ಟಿಕ್ ಸೇವಾ ಪೂರೈಕೆದಾರರಿಗೆ ಅಗತ್ಯವಾದ ಮೂಲಸೌಕರ್ಯ ಒದಗಿಸಲಾಗುತ್ತದೆ ಎಂದು ತಿಳಿಸಿದರು.
ಸಿಡಬ್ಲ್ಯುಸಿಯ ಜನರಲ್ ಮ್ಯಾನೇಜರ್ ಎಂ.ಆರ್. ಶಿವಾನಂದ ರೈ ಮಾತನಾಡಿ, ಬೆಂಗಳೂರಿನ ಉತ್ತರ ಕಾರಿಡಾರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಹೊಸ ಉಗ್ರಾಣವು ಸ್ಯಾಟಲೈಟ್ ಟೌನ್‌ರಿಂಗ್‌ರೋಡ್‌ಗೆ ಸನಿಹದಲ್ಲಿದೆ. ಇದರಿಂದ ದಾಬಸ್‌ಪೇಟ್, ನೆಲಮಂಗಲ ಮತ್ತು ಹೊಸೂರಿಗೆ ಸುಲಭವಾಗಿ ಸಂಪರ್ಕ ಸಾಧಿಸಬಹುದಾಗಿದೆ. ಸಾಮಾಜಿಕ ಮೂಲಸೌಕರ್ಯಗಳು ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹತ್ತಿರದಲ್ಲಿದೆ. ಉಗ್ರಾಣದ ಕೂಗಳತೆ ದೂರದಲ್ಲಿ ಬ್ರಿಗೇಡ್‌ಗ್ರೂಪ್ 50 ಎಕರೆ ಪ್ರದೇಶದಲ್ಲಿ ವಸತಿ ಅಪಾರ್ಟ್‌ಮೆಂಟ್ ನಿರ್ಮಾಣಗೊಳ್ಳುತ್ತಿದೆ. ಕಂಪನಿಗಳು ಸುಲಭವಾಗಿ ಈ ಮೌಲ್ಯಯುತವಾದ ಉಗ್ರಾಣ ಜಾಗವನ್ನು ಪಡೆಯಬಹುದಾಗಿದೆ. ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಗ್ರೇಡ್ ಎ ಉಗ್ರಾಣದ ಜಾಗವು ಸೀಮಿತವಾಗಿದೆ. ಯೋಜನೆ ವೆಚ್ಚ ಅಂದಾಜು 92 ಕೋಟಿ ರೂಪಾಯಿ ಎಂದೂ ವಿವರಿಸಿದರು.
ಗ್ರಾಹಕರೊಂದಿಗೆ ಸಭೆ: ಕಾರ್ಯಕ್ರಮದ ಬಳಿಕ ಅಧಿಕಾರಿಗಳ ತಂಡವು ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಕಂಟೇನರ್ ಫ್ರೈಟ್ ಸ್ಟೇಷನ್(ಸಿಎಫ್‌ಎಸ್)ಗೆ ಭೇಟಿ ನೀಡಿ ಗ್ರಾಹಕರೊಂದಿಗೆ ಸಭೆ ನಡೆಸಿತು. ವೈಟ್‌ಫೀಲ್ಡ್ ಮಾಲೂರು ಮುಖ್ಯರಸ್ತೆಯಲ್ಲಿರುವ 110 ಎಕರೆ ಪ್ರದೇಶದ ಆಲ್‌ಕಾರ್ಗೋ ಲಾಜಿಸ್ಟಿಕ್ ಪಾರ್ಕ್‌ಗೂ ಭೇಟಿ ನೀಡಿ ಪರಿಶೀಲನೆ ನಡೆಸಿತು. ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಮತ್ತು ನಿರ್ದೇಶಕರಿಗೆ ಸಿಡಬ್ಲ್ಯುಸಿ ಮತ್ತು ಲಾಜಿಸ್ಟಿಕ್ ಕ್ಷೇತ್ರದ ಸ್ಥಿತಿಗತಿ ಮತ್ತು ಇತ್ತೀಚಿನ ವಿದ್ಯಮಾನಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು. ಆರ್‌ವಿ ಲೇಔಟ್‌ನಲ್ಲಿ ಬಿಗ್ ಬಾಸ್ಕೆಟ್ ಮತ್ತು ಫ್ಲಿಪ್‌ಕಾರ್ಟ್‌ಗೆ ನೀಡಲಾಗಿರುವ ಉಗ್ರಾಣಗಳಿಗೂ ಭೇಟಿ ನೀಡಿ ಪರಿಶೀಲಿಸಿದರು.