ಸಕಲೇಶಪುರ ತಾಲೂಕು ಆಡಳಿತ ಸೌಧದಲ್ಲಿ ಬುಧವಾರ ಆಯೋಜಿಸಿದ್ದ ನಾರಾಯಣ ಗುರು ಹಾಗೂ ಮಹರ್ಷಿ ವಾಲ್ಮೀಕಿ ಜಯಂತಿ ಪೂರ್ವಸಭೆಯಲ್ಲಿ ಶಾಸಕ ಸಿಮೆಂಟ್ ಮಂಜು ಅವರೊಂದಿಗೆ ವಾಗ್ವಾದ ನಡೆಸುತ್ತಿರುವ ತಹಸೀಲ್ದಾರ್ ಸುಪ್ರಿಯಾ. 
ಜಿಲ್ಲೆ

ಶಾಸಕ-ತಹಸೀಲ್ದಾರ್ ನಡುವೆ ವಾಗ್ವಾದ

ಮಾದೇಶ್ ತಿ.ನರಸೀಪುರ

ಸಕಲೇಶಪುರ: ಪೂರ್ವಭಾವಿ ಸಭೆಗೆ ಶಾಸಕರೊಂದಿಗೆ ಸಾರ್ವಜನಿಕರು ಬಂದಿದ್ದರಿಂದ ಸಿಡಿಮಿಡಿಗೊಂಡ ತಹಸೀಲ್ದಾರ್ ಏರುಧ್ವನಿಯಲ್ಲಿ ಹೊರಹೋಗುವಂತೆ ಸೂಚಿಸಿದ್ದರಿಂದ ಶಾಸಕ ಸಿಮೆಂಟ್ ಮಂಜು ಹಾಗೂ ತಹಸೀಲ್ದಾರ್ ಸುಪ್ರಿಯಾ ನಡುವೆ ವಾಗ್ವಾದ ನಡೆಯಿತು.

ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಬುಧವಾರ ಆಯೋಜಿಸಿದ್ದ ನಾರಾಯಣ ಗುರು ಹಾಗೂ ಮಹರ್ಷಿ ವಾಲ್ಮೀಕಿ ಜಯಂತಿ ಪೂರ್ವಸಭೆಗೆ ಶಾಸಕ ಸಿಮೆಂಟ್ ಮಂಜು ಆಗಮಿಸಿದರು. ಇವರ ಹಿಂದೆ ಸಾರ್ವಜನಿಕರು ಸಭಾಂಗಣ ಪ್ರವೇಶಿಸಿದರು. ಇದರಿಂದ ಸಿಡಿಮಿಡಿಗೊಂಡ ತಹಸೀಲ್ದಾರ್ ಸುಪ್ರಿಯಾ ಏರುಧ್ವನಿಯಲ್ಲಿ ಸಭಾಂಗಣದಿಂದ ಹೊರಗಿರುವಂತೆ ಸಾರ್ವಜನಿಕರಿಗೆ ಸೂಚಿಸಿದರು.

ತಹಸೀಲ್ದಾರ್ ವರ್ತನೆಯಿಂದ ಕಸಿವಿಸಿಗೊಂಡ ಶಾಸಕರು, ಯಾಕ್ರಿ, ಸಾರ್ವಜನಿರಕರೊಂದಿಗೆ ಕೂಗಾಡುತ್ತೀರಾ ಮೃದುವಾಗಿ ಮಾತನಾಡಿ. ನಾವಿರುವುದೇ ಸಾರ್ವಜನಿಕರ ಕೆಲಸ ಮಾಡಲು, ಅವರು ಕಟ್ಟುವ ತೆರಿಗೆಯಿಂದ ನಾವು, ನೀವು ಸಂಬಳ ತೆಗೆದುಕೊಳ್ಳುತ್ತಿರುವುದು ಎಂದು ಹೇಳಿದರು.

ಇದರಿಂದ ಕೋಪಗೊಂಡ ತಹಸೀಲ್ದಾರ್ ಸುಪ್ರಿಯಾ, ನಾನಲ್ಲ, ಕೂಗಾಡುತ್ತಿರುವುದು ನೀವು ಎಂದು ಏರುದ್ವನಿಯಲ್ಲಿ ಶಾಸಕರಿಗೆ ಹೇಳಿದ್ದರಿಂದ ಕೆಲಕಾಲ ಸಭೆ ಸ್ತಬ್ಧಗೊಂಡಿತ್ತು. ಮಾತು ಮುಂದುವರಿಸಿದ ತಹಸೀಲ್ದಾರ್ ಸಭೆ ನಡೆಸುವುದಾ ಅಥವಾ ಸಾರ್ವಜನಿಕ ಕೆಲಸ ಮಾಡುವುದಾ ಎಂದು ಶಾಸಕರನ್ನು ಪ್ರಶ್ನಿಸಿದರು.

ಮೊದಲು ಸಾರ್ವಜನಿಕರ ಕೆಲಸ ಮಾಡಿ ನಂತರ ಸಭೆ ನಡೆಸೋಣ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದ್ದರಿಂದ ಮತ್ತಷ್ಟು ಕೋಪಗೊಂಡ ತಹಸೀಲ್ದಾರ್ ಸಾರ್ವಜನಿಕರು ನೀಡಿದ ಕಡತವನ್ನು ಪಡೆದು ಸಭೆಯಿಂದ ತಮ್ಮ ಕೊಠಡಿಗೆ ತೆರಳಿದರು.

ಸಭೆಗೆ ತಹಸೀಲ್ದಾರ್ ಆಗಮಿಸುವ ನಿರೀಕ್ಷೆಯಲ್ಲಿ ಕೆಲಕಾಲ ಕಾದರೂ ವಾಪಸ್ ಬಾರದ ಹಿನ್ನೆಲೆಯಲ್ಲಿ ಉಪ ತಹಸೀಲ್ದಾರ್ ಮೋಹನ್ ಕುಮಾರ್ ಸಮ್ಮುಖದಲ್ಲಿ ಸಭೆ ಆರಂಭಿಸಲಾಯಿತು. ಸಭೆ ಮುಕ್ತಾಯಗೊಂಡರೂ ತಹಸೀಲ್ದಾರ್ ಆಗಮಿಸಲಿಲ್ಲ.

ತಹಸೀಲ್ದಾರ್, ಅಧಿಕಾರಿಗಳ ವಿರುದ್ಧ ದೂರಿನ ಸುರಿಮಳೆ

ತಹಸೀಲ್ದಾರ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ದೂರುಗಳ ಸುರಿಮಳೆ ಸುರಿಸಿದ ಸಾರ್ವಜನಿಕರು ಹಲವು ತಿಂಗಳ ಕಾಲ ಅಲೆದರೂ ಕಚೇರಿಯಲ್ಲಿ ಕೆಲಸವಾಗುವುದಿಲ್ಲ. ದೂರದ ಊರಿನಿಂದ ಬರುವ ನಮಗೆ ಕೆಲಸವಾಗದಿದ್ದರೆ ಸಾವಿರಾರು ರೂ. ಖರ್ಚು ಆಗುತ್ತಿದೆ. ಕೆಲಸಕ್ಕಾಗಿ ಪ್ರತಿದಿನ ಬಂದರೆ ಪದೇ ಪದೆ ಬರಬೇಡಿ ಎಂದು ತಹಸೀಲ್ದಾರ್ ಹೇಳುತ್ತಾರೆ ಎಂದು ಸುಂಡಹಳ್ಳಿ ನಿವಾಸಿ ಮೋಹನ್ ದೂರಿದರು.

ಕಳೆದ ಎರಡೂವರೆ ವರ್ಷದಿಂದ ಕಚೇರಿ ಕೆಲಸಕ್ಕಾಗಿ ಆಗಮಿಸುತ್ತಿದ್ದೇವೆ. ಆದರೆ, ಯಾವುದೇ ಕೆಲಸವಾಗಿಲ್ಲ. ಮಧ್ಯವರ್ತಿಗಳ ನೆರವಿನಲ್ಲಿ ಬಂದರೆ ಮಾತ್ರ ಕಚೇರಿಯಲ್ಲಿ ಕೆಲಸವಾಗುತ್ತದೆ ಎಂದು ಯಡಕೇರಿ ಗ್ರಾಮದ ಪುಟ್ಟಸ್ವಾಮಿ, ಪುನೀತ್ ಆರೋಪಿಸಿದರು.

ಒಂದು ವರ್ಷದಿಂದ ನೂರಾರು ಬಾರಿ 94ಸಿಸಿ ಹಕ್ಕುಪತ್ರಕ್ಕಾಗಿ ಕಚೇರಿಗೆ ಬರುತ್ತಿದ್ದೇನೆ. ಇಲ್ಲಿಗೆ ಬಂದ ಎಲ್ಲ ತಹಸೀಲ್ದಾರ್‌ಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆದರೆ, ಹೊಸದಾಗಿ ಬಂದ ತಹಸೀಲ್ದಾರ್ ಮತ್ತೆ ಸ್ಥಳ ಪರಿಶೀಲನೆ ನಡೆಸಬೇಕು ಎನ್ನುತ್ತಾರೆ. ನಮಗೆ ಕಚೇರಿಗೆ ಅಲೆದು ಅಲೆದು ಸುಸ್ತಾಗಿದೆ. ಸೋಮವಾರದ ಒಳಗಾಗಿ ಹಕ್ಕುಪತ್ರ ನೀಡದಿದ್ದರೆ ಕಚೇರಿ ಎದುರು ಧರಣಿ ಕುಳಿತುಕೊಳ್ಳುತ್ತೆನೆ ಎಂದು ಮಣಜೂರು ಗ್ರಾಮದ ಗಿರೀಶ್, ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಸಾರ್ವಜನಿಕರ ಅಹವಾಲು ಆಲಿಸಿದ ನಂತರ ಮುಂದಿನ ದಿನಗಳಲ್ಲಿ ಎಲ್ಲ ಸರಿಯಾಗಲಿದೆ. ಸಾರ್ವಜನಿಕರನ್ನು ವಿನಾಕಾರಣ ಅಲೆಸಬೇಡಿ ಎಂದು ಶಿರಸ್ತೇದಾರ್ ರವಿಕುಮಾರ್ ಹಾಗೂ ಶ್ವೇತಾ ಅವರಿಗೆ ಶಾಸಕ ಸಿಮೆಂಟ್ ಮಂಜು ಸೂಚನೆ ನೀಡಿದರು.