ಜಿಲ್ಲೆ

ಅಧ್ಯಕ್ಷ, ಸದಸ್ಯರ ನಡುವೆ ಜಟಾಪಟಿ

ಶಿವರಾಜ.ಎಂ

 ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ

ನಗರದ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಪಂಚಾಯಿತಿ ಅಧ್ಯಕ್ಷ ಹಾಗೂ ಸದಸ್ಯರ ನಡುವೆ ಮಾತಿನ ಚಕಮಕಿ ಕೈ ಮಿಲಾಯಿಸುವ ಹಂತಕ್ಕೆ ಹೋದ ಪ್ರಸಂಗ ನಡೆದಿದೆ. ಅಧ್ಯಕ್ಷನ ಅಂಗಿ ಹರಿದು ಹಲ್ಲೆ ಮಾಡಲಾಗಿದೆ ಎಂಬ ಆರೋಪ ಒಂದೆಡೆಯಾದರೆ ಅಧ್ಯಕ್ಷ ತಾನೇ ಅಂಗಿ ಹರಿದುಕೊಂಡು ನಾಟಕ ಮಾಡಿದ್ದಾರೆ ಎಂಬ ಪ್ರತ್ಯಾರೋಪಕ್ಕೆ ಪ್ರಸಂಗಕ್ಕೆ ಕಚೇರಿ ಸಾಕ್ಷಿಯಾಗಿದ್ದು ದೊಡ್ಡ ಹೈಡ್ರಾಮವೇ ನಡೆದಿದೆ.

ಅಂಗಿ ಹರಿದಿದೆ, ಬೆರಳಿಗೆ ಗಾಯವಾಗಿದೆ:

ನೆಲಮಂಗಲದ ತ್ಯಾಮಗೊಂಡ್ಲು ಹೋಬಳಿ ಅರೇಬೊಮ್ಮನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಸದಸ್ಯರ ಮಧ್ಯೆ ಕೈ ಕೈ ಮಿಲಾಯಿಸುವ ಮೂಲಕ ಪ್ರಸಂಗ ನಡೆದಿದೆ. ಘಟನೆಯಲ್ಲಿ ಅರೇಬೊಮ್ಮನಹಳ್ಳಿಯ ಹಾಲಿ ಅಧ್ಯಕ್ಷ ರಂಗಸ್ವಾಮಿ ಅಂಗಿ ಹರಿದುಹೋಗಿದ್ದು, ಕೆಲ ಸದಸ್ಯರು, ಬೆಂಬಲಿಗರಿಗೆ ಬೆರಳುಗಳಿಗೆ ಗಾಯಗಳಾಗಿವೆ.

ನಾನು ಪರಿಶಿಷ್ಟ ಸಮುದಾಯಕ್ಕೆ ಸೇರಿದ್ದೇನೆ ಎಂಬ ಕಾರಣಕ್ಕೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಸದಸ್ಯರು ಒತ್ತಾಯಿಸುತ್ತಿದ್ದರು, ಪಂಚಾಯಿತಿಯಲ್ಲಿ ಹಳೇ ಅಧ್ಯಕ್ಷರ ಲಾಗಿನ್ ನಲ್ಲಿ ಹಣ ದುರ್ಬಳಕೆಯಾಗಿತ್ತು, ಇದನ್ನು ಪ್ರಶ್ನಿಸಿದ ಕಾರಣಕ್ಕೆ ನನ್ನನ್ನು ಬಲವಂತವಾಗಿ ರಾಜೀನಾಮೆ ಕೊಡಿಸಲು ಕರೆದುಕೊಂಡು ಬಂದಿದ್ದಾರೆ. ಉಪವಿಭಾಗಾಧಿಕಾರಿಗಳ ಕಚೇರಿಗೆ ಬಂದಾಗ ಮಾತಿನ ಚಕಮಕಿ ವೇಳೆ ಕೆಲ ಸದಸ್ಯರು ಮತ್ತು ಅವರ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎಂದು ಅಧ್ಯಕ್ಷ ರಂಗಸ್ವಾಮಿ ಆರೋಪಿಸಿದ್ದಾರೆ.

ಇದೆಲ್ಲಾ ನಾಟಕ:

ರಂಗಸ್ವಾಮಿ ಆರೋಪದಲ್ಲಿ ಹುರುಳಿಲ್ಲ. ಆತನನ್ನು ಅಧ್ಯಕ್ಷರನ್ನಾಗಿ ಮಾಡಿದ್ದೆ ನಮ್ಮ ತಂಡ. ಇದೇ 27 ಕ್ಕೆ ರಾಜೀನಾಮೆ ನೀಡಬೇಕೆಂಬ ಷರತ್ತಿನ ಮೇಲೆ ಆಣೆ ಪ್ರಮಾಣ ಮಾಡಿಸಿ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಈಗ ರಾಜೀನಾಮೆ ನೀಡಲು ಹಿಂದೇಟು ಹಾಕಿ ಈ ರೀತಿ ನಾಟಕ ಮಾಡುತ್ತಿದ್ದಾರೆ ಎಂದುಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಶೈಲೇಂದ್ರ ಪ್ರತ್ಯಾರೋಪ ಮಾಡಿದ್ದಾರೆ. ನಾವು ನಮ್ಮ ಬೆಂಬಲಿಗ 7 ಸದಸ್ಯರು ಸ್ವಯಂ ಪ್ರೇರಿತರಾಗಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲು ಬಂದಾಗ ರಂಗಸ್ವಾಮಿಯೇ ನಮ್ಮ ಮೇಲೆ ಹಲ್ಲೆ ಮಾಡಿದ್ದಾನೆ ಎಂದರು. ತನ್ನ ಬಟ್ಟೆಯನ್ನ ತಾನೇ ಹರಿದುಕೊಂಡು ನಮ್ಮ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾನೆ ಎಂದರು. ಈ ವೇಳೆ ಮುಖಂಡರಾದ ವಸಂತ್, ನಾಗೇಶ್ ಮಂಜುನಾಥ, ಲಕ್ಷ್ಮಯ್ಯ, ನವೀನ್ ಮತ್ತಿತರರು ಇದ್ದರು.