ಹುಬ್ಬಳ್ಳಿ: ಅಪಘಾತದಲ್ಲಿ ಗಾಯಗೊಂಡು ಜೀವನ್ಮರಣದ ಮಧ್ಯೆ ಹೋರಾಟ ನಡೆಸಿದ ವ್ಯಕ್ತಿಯೊಬ್ಬರು ಸತ್ತ ನಂತರವೂ ಅಂಗಾಂಗ ದಾನ ಮಾಡುವ ಮೂಲಕ ಹಲವರಿಗೆ ಜೀವದಾನ ಮಾಡಿ ಮಾದರಿ ಎನಿಸಿದ್ದಾರೆ.
ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದ ಪಂಚಾಯಿತಿ ಸದಸ್ಯ ಮಲ್ಲಪ್ಪ ಉದ್ದಾರ (36) ಅಂಗಾಂಗ ದಾನಿ.
ಇವರು ಡಿ. 25ರಂದು ಕುಕನೂರು ಸಮೀಪ ಬೈಕ್ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದರು. ಅಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ಅವರನ್ನು ಹುಬ್ಬಳ್ಳಿಯ ಸುಚಿರಾಯು ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು. ಆರಂಭಿಕ ಚಿಕಿತ್ಸೆಯ ಬಳಿಕ ಅವರು ಚೇತರಿಸಿಕೊಳ್ಳುವ ಹಂತದಲ್ಲಿದ್ದರು. ಆದರೆ, ದಿಢೀರ್ ಕಾಣಿಸಿಕೊಂಡ ಆರೋಗ್ಯ ಸಮಸ್ಯೆಯ ನಂತರ ಅವರ ಮೆದುಳು ನಿಷ್ಕ್ರಿಯಗೊಂಡಿತ್ತು.
ಈ ವಿಷಯವನ್ನು ವೈದ್ಯರು ಮಲ್ಲಪ್ಪ ಅವರ ಆಪ್ತರು ಹಾಗೂ ಕುಟುಂಬ ಸದಸ್ಯರಿಗೆ ತಿಳಿಸಿ ಅಂಗಾಂಗ ದಾನದ ಬಗ್ಗೆಯೂ ಮಾಹಿತಿ ನೀಡಿದರು. ಕುಟುಂಬದವರು ಅತ್ಯಂತ ನೋವಿನ ಸಂದರ್ಭದಲ್ಲಿಯೂ ದುಃಖ ಬದಿಗಿಟ್ಟು ದಿಟ್ಟ ಮಾನವೀಯ ನಿರ್ಧಾರ ಕೈಗೊಂಡು ಅಂಗಾಂಗ ದಾನಕ್ಕೆ ತೀರ್ಮಾನ ಕೈಗೊಂಡರು ಎಂದು ಸುಚಿರಾಯು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಮಲ್ಲಪ್ಪ ಅವರಿಗೆ ತಾಯಿ, ಆರು ಜನ ಸಹೋದರರು ಹಾಗೂ ಮೂವರು ಸಹೋದರಿಯರು ಇದ್ದಾರೆ.
ವೈದ್ಯರ ಸಲಹೆ ಬಳಿಕ ಹೃದಯ, ಯಕೃತ್ತು ಹಾಗೂ ಎರಡು ಮೂತ್ರಪಿಂಡಗಳನ್ನು ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದ ನಾಲ್ವರು ರೋಗಿಗಳಿಗೆ ಅಳವಡಿಸಲಾಯಿತು. ದೇಹದ ಅಂಗಗಳನ್ನು ಸುಚಿರಾಯು ಆಸ್ಪತ್ರೆಯಿಂದ ಬೇರೆ ಕಡೆ ತೆಗೆದುಕೊಂಡು ಹೋಗುವಾಗ ಅಲ್ಲಿ ಅತ್ಯಂತ ಭಾವುಕ ಸನ್ನಿವೇಶ ನಿಮಾರ್ಣವಾಗಿತ್ತು. ಕಿನ್ನಾಳದ ಮಂಜುನಾಥ ಶಿರಿಗೇರಿ, ಮಹಾದೇವಯ್ಯ ಹಿರೇಮಠ, ವಿರೂಪಾಕ್ಷಪ್ಪ ಐತಾಪುರ ಇತರರು ಈ ಸಂದರ್ಭದಲ್ಲಿದ್ದರು.
ದೇಹದ ಒಂದೊಂದು ಅಂಗಕ್ಕಾಗಿ ಸಾಕಷ್ಟು ಜೀವಗಳು ಕಾಯುತ್ತಿರುತ್ತವೆ. ಮಲ್ಲಪ್ಪ ಅವರ ಕುಟುಂಬದವರಂತೆ ಬೇರೆಯವರೂ ನಿರ್ಧಾರ ಕೈಗೊಂಡರೆ ಸಂಕಷ್ಟದಲ್ಲಿರುವವರಿಗೆ ಅನುಕೂಲವಾಗುತ್ತದೆ ಎಂದು ಸುಚಿರಾಯು ಆಸ್ಪತ್ರೆ ನರರೋಗ ತಜ್ಞ ರಾಜು ಕದಂ ಅಭಿಪ್ರಾಯಪಡುತ್ತಾರೆ.