ತುಮಕೂರು : ಹೆಣ್ಣೆಂದರೆ ಕೇವಲ ಸಾಂಸಾರಿಕ ಜೀವನಕ್ಕೆ ಸೀಮಿತ ಎನ್ನುವ ಕಾಲ ಸರಿದು ಪುರುಷ ಸಮಾನವಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಗುರುತಿಸಿಕೊಳ್ಳುವಂತಾಗಬೇಕು ಎಂದು ಸಮಾಜಕಲ್ಯಾಣ ಇಲಾಖೆ ಜಂಟಿನಿರ್ದೇಶಕಿ ಪ್ರೇಮಾ ಹೇಳಿದರು.
ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಗುರುವಾರ ರಾಷ್ಟ್ರೀಯ ಮಹಿಳಾ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ ಕಾನೂನು ಅರಿವಿನ ಮುಖಾಂತರ ಮಹಿಳಾ ಸಬಲೀಕರಣ ಕುರಿತು ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆಡು ಮುಟ್ಟದ ಸೊಪ್ಪಿಲ್ಲವೆಂಬಂತೆ ಮಹಿಳೆ ಕಾರ್ಯ ನಿರ್ವಹಿಸದ ಕ್ಷೇತ್ರವಿಲ್ಲ ಎಂಬ ಮಾತನ್ನು ತಮ್ಮ ಜೀವನದಲ್ಲಿ ಅಡವಳಿಸಿಕೊಂಡು ಸುಸಂಸ್ಕೃತ ವ್ಯಕ್ತಿತ್ವದಿಂದ ಸಮಾಜಕ್ಕೆ ಮಾದರಿಯಾಗಬೇಕು. ಪ್ರತಿಯೊಂದು ಹೆಣ್ಣು ಒಂದೊಂದು ಶಕ್ತಿಯಾಗಿ ರೂಪುಗೊಳ್ಳಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಳು ಹೆಚ್ಚುತ್ತಿದ್ದು ಹಲವು ಕಾನೂನು ಜಾರಿಯಲ್ಲಿದ್ದರೂ ದೌರ್ಜನ್ಯವನ್ನು ಸಂಪೂರ್ಣವಾಗಿ ತೊಡೆದು ಹಾಕಲಾಗುತ್ತಿಲ್ಲ ಎಂಬುದು ವಿಷಾದನೀಯ. ಅಂತರ್ಜಾತಿ ವಿವಾಹ, ವಿಧವಾ ವಿವಾಹ ಸೇರಿ ಸಾಮೂಹಿಕ ವಿವಾಹಗಳಿಗೆ ಧನ ಸಹಾಯ ಮಾಡುವ ಮೂಲಕ ಮಹಿಳೆಯರನ್ನು ಮಾನಸಿಕವಾಗಿ ಗಟ್ಟಿಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಅಲ್ಲದೆ, ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಿ ಪ್ರೋತ್ಸಾಹಿಸುವ ಉದ್ದೇಶದಿಂದ ಇಲಾಖೆ ವತಿಯಿಂದ ವಿವಿಧ ರೀತಿಯ ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದು ತಿಳಿಸಿದರು.
ವಿದ್ಯೋದಯ ಕಾನೂನು ಕಾಲೇಜಿನ ಸಹಾಯಕ ಪ್ರಾಚಾರ್ಯ ದ್ಯಾನ ಬಸವರಾಜು ಅವರು ಮಹಿಳೆಯರ ಆಸ್ತಿ ಹಕ್ಕುಗಳು ಹಾಗೂ ವಕೀಲರಾದ ಬೇಬಿ ಕವಿತಾ ಅವರು ಕೌಟುಂಬಿಕ ದೌರ್ಜನ್ಯದಿಂದ ಮಹಿಳಾ ಸಂರಕ್ಷಣಾ ಕಾಯ್ದೆ, ಪೋಕ್ಸೋ ಕಾಯ್ದೆ, ಮಹಿಳೆ ಮತ್ತು ಮಕ್ಕಳ ಕಳ್ಳ ಸಾಗಾಣಿಕೆ ವಿಷಯಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಅಭ್ಯುದಯ ಸೇವಾ ಟ್ರಸ್ಟ್‌ನ ಸಮಾಜ ಸೇವಕಿ ಲಲಿತಾ ಮಲ್ಲಪ್ಪ, ಪೊಲೀಸ್ ಇಲಾಖೆ ಪ್ರಶಿಕ್ಷಣಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.
ಸುಶಿಕ್ಷಿತ ಮಹಿಳೆಯರಿಂದ ಸದೃಢ ಸಮಾಜ: ಉತ್ತಮ ಶಿಕ್ಷಣ ಪಡೆದ ಸುಶಿಕ್ಷಿತ ಮಹಿಳಾ ವರ್ಗದಿಂದ ಸದೃಢ ಸಮಾಜವನ್ನು ನಿರ್ಮಿಸಲು ಸಾಧ್ಯ. ಮಹಿಳೆಯರ ಹಕ್ಕುಗಳನ್ನು ರಕ್ಷಿಸುವುದು, ಗೌರವಿಸುವುದು ಹಾಗೂ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವುದು ನಮ್ಮೆಲ್ಲರ ಕರ್ತವ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ರಾಘವೇಂದ್ರ ಶೆಟ್ಟಿಗಾರ್ ಹೇಳಿದರು. ಮಹಿಳೆ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ನಿರ್ಮೂಲನೆ ಮಾಡುವಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು. ಜೀವನದಲ್ಲಿ ಶಿಕ್ಷಣ, ಧ್ಯಾನ, ಮಿತ ಮಾತು ಹಾಗೂ ಸದಾ ಜಾಗೃತಿ ಈ 4 ಸಿದ್ಧಾಂತಗಳನ್ನು ಅಳವಡಿಸಿಕೊಂಡರೆ ಸ್ವಾಸ್ಥ್ಯ ಸಮಾಜವನ್ನು ಕಟ್ಟಬಹುದು. ಈ ಮೂಲಕ ಮಹಿಳಾ ಸಬಲೀಕರಣ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಸಮಾಜದಲ್ಲಿ ಮಹಿಳೆಯ ಅಸ್ತಿತ್ವವು ಮಹಿಳಾ ಸಬಲೀಕರಣದ ಮೇಲೆ ಅವಲಂಬಿತವಾಗಿದೆ. ತನ್ನ ನಿರ್ಧಾರಗಳನ್ನು ತಾನೇ ತೆಗೆದುಕೊಳ್ಳಲು ಸಮರ್ಥವಾಗುವುದೇ ಸಬಲೀಕರಣ. ಮಹಿಳೆಯ ವೈಯಕ್ತಿಕ ಅಭಿಪ್ರಾಯಗಳೂ ಸಹ ಸಮಾಜದ ಒಳಿತಿಗೆ ಪೂರಕವಾಗಬೇಕು. ಟಿ.ಜೆ.ಉದೇಶ್ ಹೆಚ್ಚುವರಿ ಪೊಲೀಸ್ ಅಧೀಕ್ಷಕ