ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಚಿನ್ನಾಭರಣ ಕಳ್ಳತನ ಪ್ರಕರಣವೊಂದರಲ್ಲಿ ಕಳ್ಳ ಜೈಲುಪಾಲಾದರೆ ಕದ್ದ ಚಿನ್ನಾಭರಣ ಖರೀದಿಸಿದ ಅಕ್ಕಸಾಲಿಗ ಲಕ್ಷಾಂತರ ರೂ.ಕಳೆದುಕೊಂಡಿರುವ ಪ್ರಸಂಗವೊಂದು ದೊಡ್ಡಬಳ್ಳಾಪುರ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ದೊಡ್ಡಬಳ್ಳಾಪುರದ ಮಜರಾಹೊಸಹಳ್ಳಿ ನಿವಾಸಿ ವಿಕಾಸ್ (28) ಬಂಧಿತ ಆರೋಪಿ, ದೊಡ್ಡಬಳ್ಳಾಪುರ ನಗರದ ಮಾರ್ಕೆಟ್ ಶಾಲೆ ಸಮೀಪದ ಅಕ್ಕಸಾಲಿಗ ಹಣ ಕಳೆದುಕೊಂಡವರು. ದೊಡ್ಡಬಳ್ಳಾಪುರ ಠಾಣಾ ಇನ್ಸ್‌ಪೆಕ್ಟರ್ ಸಾದಿಕ್‌ಪಾಷಾ ಹಾಗೂ ತಂಡ ಕಾರ್ಯಾಚರಣೆ ನಡೆಸಿ ಕಳ್ಳನನ್ನು ಬಂಧಿಸಿ ಚಿನ್ನಾಭರಣವನ್ನು ಮಾಲೀಕರ ವಶಕ್ಕೆ ನೀಡಿದ್ದಾರೆ.
ಏನಿದು ಪ್ರಕರಣ?
ಆರೋಪಿ ವಿಕಾಸ್ ತನ್ನ ಸಂಬಂಧಿಕರ ಮನೆಯಲ್ಲಿ ಚಿನ್ನದ ಚೈನ್ ಹಾಗೂ ಉಂಗುರವನ್ನು ಕಳವು ಮಾಡಿದ್ದ. ಕದ್ದ ಆಭರಣವನ್ನು ಪರಿಚಯಸ್ಥರಾಗಿದ್ದ ಅಕ್ಕಸಾಲಿಗನ ಹತ್ತಿರ ಹೋಗಿ ತನ್ನ ಸ್ನೇಹಿತನ ತಾಯಿಗೆ ಹೃದಯದ ಅಪರೇಷನ್ ಆಗಬೇಕಿದೆ ತುರ್ತಾಗಿ ಹಣದ ಅವಶ್ಯಕತೆ ಇದೆ ಎಂದು ನಾಟಕವಾಡಿದ್ದ. ಇದನ್ನು ನಂಬಿದ ಅಕ್ಕಸಾಲಿಗ 3.75 ಲಕ್ಷ ರೂ.ನಗದು ನೀಡಿದ್ದ.
ಮೋಜು ಮಸ್ತಿ ಮಾಡುತ್ತಿದ್ದ ಆರೋಪಿ:
ಪ್ರಕರಣ ಜು3ರಂದು ನಡೆದಿದ್ದು, ಜು.13ರಂದು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ತನಿಖೆ ಆರಂಭಿಸಿದ ಪೊಲೀಸರಿಗೆ ಪರಿಚಯಸ್ಥರ ಕೈವಾಡವಿರುವ ಶಂಕೆ ಮೂಡಿತ್ತು.ಆರೋಪಿ ಕಳವು ಮಾಡಿದ ಮನೆಯವರ ಹತ್ತಿರ ಸಂಬಂಧಿಯಾಗಿದ್ದು ಆಗಾಗ ಮನೆಗೆ ಹೋಗಿ ಬರುತ್ತಿದ್ದ ಮಾಹಿತಿ ಕಲೆ ಹಾಕಲಾಗಿತ್ತು. ಆರೋಪಿ ಇತ್ತೀಚಿಗೆ ಬುಲೆಟ್ ಬೈಕ್ ಖರೀದಿ ಮಾಡಿದ್ದ. ಪ್ಯಾಕ್ಟರಿಯೊಂದರಲ್ಲಿ ಸಣ್ಣ ಕೆಲಸದಲ್ಲಿದ್ದ ಈತ ಕೆಲವು ದಿನಗಳಿಂದ ಹಣವನ್ನು ನೀರಿನಂತೆ ಖರ್ಚು ಮಾಡಿ ಮೋಜುಮಸ್ತಿ ಮಾಡುತ್ತಿರುವ ಬಗ್ಗೆ ಮಾಹಿತಿ ಕಲೆಹಾಕಿದ ಪೊಲೀಸರು ಶಂಕೆಯ ಮೇಲೆ ವಶಕ್ಕೆ ಪಡೆದು ತನಿಖೆ ನಡೆಸಿದಾಗ ಆರೋಪಿ ಕಳ್ಳತನದ ಮಾಹಿತಿ ಬಾಯ್ಬಿಟ್ಟಿದ್ದ ಎನ್ನಲಾಗಿದೆ.
ಚಿನ್ನ ಕರಗಿಸಿದ್ದ ಅಕ್ಕಸಾಲಿಗ: ಆರೋಪಿಯಿಂದ ಚಿನ್ನಾಭರಣ ಪಡೆದ ಅಕ್ಕಸಾಲಿಗ ಅದನ್ನು ಕರಗಿಸಿ ಪರಿಚಯದ ಜ್ಯುವೆಲ್ಲರಿ ಶಾಪ್‌ಗೆ ಮಾರಾಟ ಮಾಡಿದ್ದ ಎನ್ನಲಾಗಿದೆ. ಕದ್ದ ಮಾಲು ಇಬ್ಬರ ಕೈಬದಲಾಗಿತ್ತು. ಪೊಲೀಸರು ತನಿಖೆ ವೇಳೆ ಅಕ್ಕಸಾಲಿಗನನ್ನು ವಿಚಾರಿಸಿದಾಗ ಪರಿಚಯದವರು ಹಾರ್ಟ್ ಆಪರೇಷನ್ ಎಂಬ ಕಾರಣಕ್ಕೆ ಮಾನವೀಯ ದೃಷ್ಟಿಯಲ್ಲಿ ಚಿನ್ನಾಭರಣ ಪಡೆದಿದ್ದಾಗಿ ತಿಳಿಸಿದ್ದರು. ತನಿಖೆ ಆಧಾರದ ಮೇಲೆ ಚಿನ್ನಾಭರಣ ವಶಕ್ಕೆ ನೀಡುವಂತೆ ಪೊಲೀಸರು ಸೂಚಿಸಿದ್ದರು. ಈಗಾಗಲೇ ಚಿನ್ನವನ್ನು ಕರಗಿಸಿದ್ದರಿಂದ ಅದೇ ಅಕ್ಕಸಾಲಿಗ ಮತ್ತೆ ಅದೇ ಮಾದರಿಯ ಅಷ್ಟೇ ಗ್ರಾಂ ತೂಕದ ಚಿನ್ನದ ಸರ ಹಾಗೂ ಉಂಗುರ ತಯಾರಿಸಿ ಪೊಲೀಸರ ವಶಕ್ಕೆ ನೀಡಿದ್ದಾನೆ. ಅದನ್ನು ಪೊಲೀಸರು ದೂರುದಾರರ ವಶಕ್ಕೆ ನೀಡಿದ್ದಾರೆ.
ನಂಬಿಕೆಯೆ ಮಾರಕವಾಯ್ತು: ಸಂಬಂಧಿಕನೆಂಬ ಕಾರಣಕ್ಕೆ ಮನೆಯಲ್ಲಿ ಸ್ವಚ್ಛಂದವಾಗಿ ಓಡಾಡಲು ಅವಕಾಶವಿತ್ತು ಇದೇ ನಂಬಿಕೆಯನ್ನು ದುರುಪಯೋಗ ಮಾಡಿಕೊಂಡು ಬೆಡ್‌ರೂಂನಲ್ಲಿದ್ದ ಕಬೋರ್ಡ್‌ನಿಂದಲೇ ಚಿನ್ನಾಭರಣ ಲಪಟಾಯಿಸಿದ್ದ. ಮತ್ತೊಂದು ಕಡೆ ಪರಿಚಯಸ್ಥ ಎಂಬ ಕಾರಣಕ್ಕೆ ಚಿನ್ನಾಭರಣ ಪಡೆದು ಹಣ ನೀಡಿದ್ದ ಅಕ್ಕಸಾಲಿನ ಅತ್ತ ಚಿನ್ನಾಭರಣವನ್ನೂ ಇತ್ತ ಹಣವನ್ನು ಎರಡೂ ಕಳೆದುಕೊಂಡಿದ್ದಾನೆ.
ಕಳ್ಳತನ ಪ್ರಕರಣದ ಬೆನ್ನತ್ತಿದಾಗ ಪರಿಚಯಸ್ಥರ ಮೇಲೆ ಅನುಮಾನ ಮೂಡಿತ್ತು. ಅನುಮಾನದ ಮೇಲೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಪತ್ತೆಯಾಯಿತು. ಚಿನ್ನಾಭರಣ ಖರೀದಿ ಮಾಡಿದ್ದವರಿಂದ ಮಾಲು ವಶಕ್ಕೆ ಪಡೆದು ದೂರುದಾರರ ವಶಕ್ಕೆ ನೀಡಲಾಗಿದೆ. ಆರೋಪಿಯನ್ನು ಜೈಲಿಗೆ ಕಳುಹಿಸಲಾಗಿದೆ. ಕಳ್ಳತನದಂತೆ ಕಳವು ಮಾಲು ಖರೀದಿಸುವುದೂ ಅಪರಾಧ.
ಸಾಧಿಕ್‌ಪಾಷಾ, ಇನ್‌ಸ್ೆಕ್ಟರ್ ದೊಡ್ಡಬಳ್ಳಾಪುರ ಗ್ರಾಮಾಂತರ