ಖಾಲಿ ಜಾಗದಲ್ಲಿ ಗೇರು ಕೃಷಿಗೆ ಮುಂದಾದ ರೈತ. 
ಜಿಲ್ಲೆ

ಅಡಿಕೆಗೆ ಗೇರು ಪರ್ಯಾಯ? CASHEW

ಪ್ರಮುಖ ಮುಖ್ಯಾಂಶಗಳು

  • ಹಣ್ಣಿನ ಮೌಲ್ಯವರ್ಧನೆಯಿಂದ ಲಾಭ
  • ಖರ್ಚು ಕಡಿಮೆ ಆದಾಯ ಅಧಿಕ
ಪುತ್ತೂರು: ಕೆಲವು ವರ್ಷಗಳಿಂದ ನಿರ್ಲಕ್ಷ್ಯಕ್ಕೊಳಗಾದ ಗೇರು ಕೃಷಿಗೆ ಈಗ ಪುನಶ್ಚೇತನ ನೀಡುವ ಪ್ರಯತ್ನ ನಡೆಯುತ್ತಿದೆ. ಮೂರು ತಿಂಗಳಿಂದ ಗೇರು ಹಣ್ಣಿನ ಮೌಲ್ಯವರ್ಧನೆ ಕರಾವಳಿ ಭಾಗದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಯುವ ಸಮುದಾಯ ಗೇರು ಬೆಳೆಯತ್ತ ಹೆಚ್ಚಿನ ಆಸಕ್ತಿ ತೋರಿಸಲು ಮುಂದಾಗುತ್ತಿದೆ. ಅಡಿಕೆಯ ನಿರ್ವಹಣಾ ವೆಚ್ಚದ ಮುಂದೆ ಗೇರು ಕೃಷಿ ಲಾಭದಾಯಕವಾಗಿದ್ದು, ಪರ್ಯಾಯ ಬೆಳೆಯಾಗಿ ಹೊರಹೊಮ್ಮುವ ನಿರೀಕ್ಷೆಯನ್ನು ಮೂಡಿಸುತ್ತಿದೆ.
ಕರಾವಳಿ ಭಾಗದಲ್ಲಿ ಅಡಿಕೆ ಬೆಳೆ ನೀಡುವ ಆದಾಯದ ಮುಂದೆ ಯಾವ ಕೃಷಿಯನ್ನೂ ಮಾಡಲು ಜನರು ಮುಂದೆ ಬರುತ್ತಿಲ್ಲ. ಆದರೆ ಕೆಲವು ವರ್ಷದಿಂದ ಅಡಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ ವಿವಿಧ ರೋಗಗಳ ನಿರ್ವಹಣೆ ಸವಾಲಾಗಿದೆ. ಔಷಧ ಸಿಂಪಡಣೆ ಹಾಗೂ ಕಾರ್ಮಿಕರ ಕೊರತೆಯಿಂದ ಕೃಷಿಕರ ಆದಾಯಕ್ಕೆ ಗಣನೀಯ ಹೊಡೆತ ನೀಡಿದೆ. ನಿರ್ವಹಣೆಗೆ ಹೆಚ್ಚಿನ ಮೊತ್ತವನ್ನು ವ್ಯಯಿಸುವ ಪರಿಸ್ಥಿತಿಯಿದೆ.
ವಿವಿಧ ಹಣ್ಣುಗಳನ್ನು ಬೆಳೆಯಲು ಮುಂದಾದರೂ, ಕೆಲವರು ಕೈಸುಟ್ಟುಕೊಂಡಿದ್ದಾರೆ. ಅಡಿಕೆಗೆ ಹೋಲಿಸಿದರೆ ಇದು ಲಾಭದಾಯಕವಾಗಿಲ್ಲ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ. ಈ ನಡುವೆ, ಗೇರುಹಣ್ಣಿನ ಮೇಳಗಳು ಯಶಸ್ವಿಯಾಗಿದ್ದು, ವ್ಯರ್ಥವಾಗಿ ಹೋಗುವ ಗೇರುಹಣ್ಣಿಗೂ ಕೆ.ಜಿ.ಗೆ ೧೫ರಿಂದ ೨೦ ರೂ.ಮಾರುಕಟ್ಟೆ ಧಾರಣೆ ಲಭಿಸಲಾರಂಭಿಸಿದೆ. ಗೇರುಬೀಜಕ್ಕೂ ಕೆಲವು ವರ್ಷದಿಂದ ಕೆ.ಜಿ.ಗೆ ೧೦೦ರೂ.ಗಿಂತ ಅಧಿಕ ದರವಿದೆ.
ಇತ್ತೀಚಿನ ದಿನದಲ್ಲಿ ಗೇರುಬೀಜದ ಜತೆಗೆ ಗೇರುಹಣ್ಣಿಗೂ ಬೆಲೆ ಬರಲು ಪ್ರಾರಂಭವಾಗಿದೆ. ಉತ್ತಮ ತಳಿಯ ಗೇರು ಹಣ್ಣು ೬ರಿಂದ ೮ಕ್ಕೆ ೧ ಕೆ.ಜಿ.ಯಾಗುತ್ತದೆ. ಕೆ.ಜಿ. ಒಂದಕ್ಕೆ ೧೫ರಿಂದ ೨೦ ರೂ ಧಾರಣೆ ಹೊಂದಿದೆ. ಗೇರುಬೀಜ ಹಾಗೂ ಹಣ್ಣು ಎರಡರ ಮಾರಾಟದಿಂದ ಕೃಷಿಕರು ಉತ್ತಮ ಆದಾಯವನ್ನು ಪಡೆಯಬಹುದಾಗಿದೆ. ಈಗಿನ ಅಡಕೆ ಧಾರಣೆಗೆ ಹೋಲಿಸಿದರೆ, ಗೇರುಬೀಜವೂ ಧಾರಣೆಯಲ್ಲಿ ಪೈಪೋಟಿ ನೀಡಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ತಳಿಗಳ ಅಭಿವೃದ್ಧಿ

ದೇಶಾದ್ಯಂತ ಇರುವ ಗೇರು ಸಂಶೋಧನಾಲಯಗಳು ೬೦ಕ್ಕೂ ಅಽಕ ತಳಿಗಳನ್ನು ಅಭಿವೃದ್ಧಿಪಡಿಸಿವೆ. ಇದರಲ್ಲಿ ಗೇರುಬೀಜ, ಗೇರುಹಣ್ಣುಗಳಿಗಾಗಿಯೇ ವಿವಿಧ ತಳಿಗಳಿವೆ. ಮರಗಳಿಗೆ ಬರುತ್ತಿದ್ದ ವಿವಿಧ ರೋಗ ತಡೆದುಕೊಳ್ಳುವ ಪ್ರತಿರೋಧ ಶಕ್ತಿ ಹೊಂದಿದ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇದರಿಂದ ಅಪಾಯಕಾರಿ ರಾಸಾಯನಿಕಗಳ ಸಿಂಪಡಣೆಯೂ ಇಲ್ಲದೆ ಗೇರು ಕೃಷಿ ಮಾಡಬಹುದು.

ಮೌಲ್ಯವರ್ಧಿತ ಉತ್ಪನ್ನ

ಗೇರುಹಣ್ಣಿನಲ್ಲಿ ಜೂಸ್, ಪಲ್ಪ್, ಚಿಪ್ಸ್, ಬಿಸ್ಕೆಟ್ ಸೇರಿ ೩೦ಕ್ಕೂ ಅಧಿಕ ಉತ್ಪನ್ನಗಳನ್ನು ಪುತ್ತೂರು ಗೇರು ಸಂಶೋಧನಾಲಯದಲ್ಲಿ ವಿಜ್ಞಾನಿಗಳು ತಯಾರಿಸಿ ಸೈ ಎನಿಸಿಕೊಂಡಿದ್ದಾರೆ. ಈಗಗಾಲೇ ೧೫ಕ್ಕೂ ಅಽಕ ಉತ್ಪನ್ನ ಅಽಕೃತವಾಗಿ ಮಾರುಕಟ್ಟೆಗೂ ಬಿಡುಗಡೆಯಾಗಿವೆ. ಗೇರು ಮೇಳಗಳಲ್ಲಿ ಕೃಷಿಕರಿಂದ ವಿವಿಧ ರೀತಿಯ ಉತ್ಪನ್ನಗಳು ತಯಾರಾಗಿ ಬರುತ್ತಿದ್ದು, ಎಲ್ಲೆಡೆಯಿಂದ ಬೇಡಿಕೆ ಲಭಿಸುತ್ತಿದೆ. ಮುಂದಿನ ವರ್ಷಗಳಲ್ಲಿ ಈ ಬೇಡಿಕೆ ಪೂರೈಸಲು ಬೇಕಾದಷ್ಟು ಗೇರು ಹಣ್ಣುಗಳಿಲ್ಲದಿರುವುದೂ ಕೃಷಿಕರಿಗೆ ಲಾಭದಾಯಕವಾಗಲಿದೆ.
"

ಅಡಿಕೆಗೆ ಬೇಸಿಗೆ ಮಳೆಗಾಲದಲ್ಲಿ ಮೂರು ಮೂರು ಬಾರಿ ಔಷಧ ಸಿಪಂಡಣೆ ಮಾಡುವುದು, ಕಾಲಕಾಲಕ್ಕೆ ಗೊಬ್ಬರ, ನೀರು ನೀಡುವುದು ಸವಾಲಾಗಿದೆ. ಗೇರು ಗಿಡಗಳ ನಿರ್ವಹಣೆಗೆ ಬಹಳ ಕಡಿಮೆ ವೆಚ್ಚ ಬೇಕಾಗಿದ್ದು, ಅಡಿಕೆಗೆ ಹೋಲಿಸಿದರೆ ಲಾಭದಾಯಕವಾಗಿದೆ. ಹಣ್ಣಿನ ಮೌಲ್ಯವರ್ಧನೆಗೆ ಇದೇ ರೀತಿಯ ಬೇಡಿಕೆ ಮುಂದುವರಿದರೆ ಗೇರು ಕೃಷಿಕರಿಗೆ ವರದಾನವಾಗಲಿದೆ.

— ಅಶ್ವಥ್ ಗೇರು ಕೃಷಿಕರು, ಪುತ್ತೂರು


"

ಗೇರು ಮೇಳಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಗೇರುಹಣ್ಣಿನ ಲಭ್ಯತೆಯಿಲ್ಲದೆ ಬೇಡಿಕೆ ಪೂರೈಸಲು ಸಾಧ್ಯವಾಗಿರಲಿಲ್ಲ. ಗೇರು ಕೃಷಿಗೆ ಮುಂದಿನ ದಿನದಲ್ಲಿ ಹೆಚ್ಚಿನ ಬೇಡಿಕೆಯಿದ್ದು, ಉತ್ತಮ ಆದಾಯ ಲಭಿಸಲಿದೆ.

— ಭರತ್‌ರಾಜ್ ಸೊರಕೆ ಅಧ್ಯಕ್ಷರು, ರೈತ ಕುಡ್ಲ ಪ್ರತಿಷ್ಠಾನ