ಜಿಲ್ಲೆ

ಅಡಕೆ ಔಷಧ ಸಿಂಪಡಣೆಗೆ ಸುಲಭ ಯಂತ್ರ

ವಿಟ್ಲ: ಅಡಕೆ ಮರಗಳಿಗೆ ಮದ್ದು ಸಿಂಪಡಣೆ ಮಾಡಲು ಕೃಷಿಕರು ಸಾಮಾನ್ಯ ವೀಡ್ ಕಟ್ಟರ್ ಬಳಸಿಕೊಂಡು ಸಿಂಗಲ್ ಪಿಸ್ಟನ್ ಪವರ್ ಸ್ಪ್ರೇಯರ್ ರೂಪಿಸಿರುವುದು ಗಮನ ಸೆಳೆದಿದೆ.

ಅಡಕೆ ಮರಗಳಿಗೆ ಔಷಧ ಸಿಂಪಡಣೆ ಮಾಡುವ ಪವರ್ ಸ್ಪ್ರೇಯರ್ ಗುಣಮಟ್ಟದ ಯಂತ್ರಗಳಿಗೆ ಕನಿಷ್ಠ 10 ಸಾವಿರ ರೂ. ನೀಡಬೇಕು. ಔಷಧ ಸಿಂಪಡಣೆ ಬಳಿಕ ಯಂತ್ರಗಳು ನಿರುಪಯುಕ್ತವಾಗಿ ಮೂಲೆ ಸೇರಿ ಮುಂದಿನ ವರ್ಷ ಬಳಕೆಯ ಹೊತ್ತಿಗೆ ದುರಸ್ತಿ ಬಂದಿರುತ್ತದೆ. ದುಂದುವೆಚ್ಚ ತಪ್ಪಿಸಿ ನಿತ್ಯ ಬಳಸುವ ವೀಡ್ ಕಟ್ಟರ್ ಯಂತ್ರ ಬಳಸಿಕೊಂಡು, ಮುಂಭಾಗಕ್ಕೆ ಪವರ್ ಸ್ಪ್ರೇಯರ್ ಪಂಪ್ ಬಳಸಿ ಔಷಧ ಹೊಡೆಯಲು ಸಣ್ಣ ಬೆಳೆಗಾರರು ಮಾಡಿರುವ ಪ್ರಯೋಗ ಯಶಸ್ವಿಯಾಗಿದೆ. ಇದಕ್ಕೆ ತಗುಲುವ ವೆಚ್ಚ 4.5 ಸಾವಿರ ರೂ. ಮಾತ್ರ.

ಜೋಡಣೆ ಹೇಗೆ?: 2 ಸ್ಟ್ರೋಕ್ ಅಥವಾ 4 ಸ್ಟ್ರೋಕ್ ಇಂಜಿನ್‌ಗಳ ವೀಡ್ ಕಟ್ಟರ್‌ನ ಕ್ಲಚ್ ಹೈಸಿಂಗ್‌ಗೆ ಹೊಂದುವ ಪವರ್ ಸ್ಪ್ರೇಯರ್ ಸಿಂಗಲ್ ಪಿಸ್ಟನ್ ಪಂಪ್ ಜೋಡಿಸಬೇಕು. ಎತ್ತರದ ಅಡಕೆ ಮರಗಳಿರುವ ತೋಟದಲ್ಲಿ ಪ್ರಯೋಗ ನಡೆಸಿದಾಗ ಪ್ರೆಷರ್ ಕಡಿಮೆ ಎಂದು ಕಾರ್ಮಿಕರಿಂದ ಅಭಿಪ್ರಾಯ ಲಭಿಸಿತ್ತು. ಕಂಟ್ರೋಲರ್ ಕಣ್ಣು ಬದಲಾವಣೆ ಹಾಗೂ ಕಾರ್ಬೋರೇಟರ್ ಎಜೆಸ್ಟ್‌ಮೆಂಟ್ ಮೂಲಕ ಇದನ್ನು ಸರಿಪಡಿಸಲಾಗಿದೆ. ಸಾಮಾನ್ಯ ಸ್ಪ್ರೇಯರ್‌ನಿಂದ ಸಿಂಪಡಣೆ ಮಾಡುವಷ್ಟು ಎತ್ತರಕ್ಕೆ ಸಲೀಸಾಗಿ ಔಷಧ ಹೊಡೆಯಬಹುದು. ‘ಪವರ್ ಸ್ಪ್ರೇಯರ್‌ಗಳ ದುರಸ್ತಿ ಮಾಡುತ್ತಿದ್ದ ನಮ್ಮಲ್ಲಿ ಅಡಕೆ ಬೆಳೆಗಾರರು ಬಿಡಿಭಾಗಗಳನ್ನು ಬಳಸಿ ಸಿಂಗಲ್ ಪಿಸ್ಟನ್ ಪವರ್ ಸ್ಪ್ರೇಯರ್ ಪಂಪ್ ಮಾಡಿಸಿಕೊಂಡು ಹೋಗುತ್ತಾರೆ. ಕೃಷಿಕರ ಈ ಪ್ರಯೋಗ ಯಶಸ್ವಿಯಾಗಿದ್ದು, ಹೀಗೆ ಮಾಡುವವರ ಸಂಖ್ಯೆ ಹೆಚ್ಚಿದೆ’ ಎನ್ನುತ್ತಾರೆ ವಿಟ್ಲದ ಕಿಸಾನ್ ಆಗ್ರೋದ ರಾಜೇಶ್ ಡಿ. ಮುರುವ.

ಅಡಕೆಗೆ ಔಷಧ ಸಿಂಪಡಣೆಗೆ ಸಾಮಾನ್ಯವಾಗಿ ಗಾಳಿ ಹಾಕುವ ಪಂಪ್ ಬಳಸಲಾಗುತ್ತಿದ್ದು, ಒಬ್ಬ ವ್ಯಕ್ತಿಯ ಅವಲಂಬನೆ ಇದಕ್ಕೆ ಅಗತ್ಯವಿತ್ತು. ಈಗ ಆ ಕೆಲಸವನ್ನು ಯಂತ್ರಗಳು ಸುಲಭವಾಗಿ ಮಾಡುತ್ತವೆ. ಅಷ್ಟೇ ಪ್ರೆಶರ್ ಈಗ ಅಭಿವೃದ್ಧಿಪಡಿಸಿರುವ ಈ ಯಂತ್ರವೂ ನೀಡುತ್ತಿದೆ. ಒಂದು ಯಂತ್ರವನ್ನು ಹಲವು ಉದ್ದೇಶಕ್ಕೆ ಬಳಸಲು ಸಾಧ್ಯವಾಗಿರುವುದು ಸಣ್ಣ ಕೃಷಿಕರಿಗೆ ಉಪಕಾರಿಯಾಗಿದೆ. - ಶಿವಪ್ರಸಾದ ಮೆಣಸಿನಗಂಡಿ, ಕೃಷಿಕ, ಅಳಿಕೆ