ಪುತ್ತೂರು: ಅಕ್ಟೋಬರ್ ಮೊದಲ ವಾರದಿಂದ ಹೊಸ ಕೊಲಿನ ಅಡಕೆ ಮಾರುಕಟ್ಟೆಗೆ ಪ್ರವೇಶಿಸುವುದು ವಾಡಿಕೆ. ಈ ಬಾರಿ ಹೊಸ ಅಡಕೆ ಬೆಲೆ ಇತಿಹಾಸ ಸೃಷ್ಟಿಸಿದೆ. ಕ್ಯಾಂಪ್ಕೊ ಮಾರುಕಟ್ಟೆಯಲ್ಲಿ ಇದೇ ಮೊದಲ ಬಾರಿ ಕೆ.ಜಿ.ಗೆ 273 ರೂ.ನಿಂದ 275 ರೂ.ಧಾರಣೆ ಬೆಳೆಗಾರರಿಗೆ ಲಭ್ಯವಾಗಿದ್ದು, ಐತಿಹಾಸಿಕ ದಾಖಲೆ ಬರೆದಿದೆ.
ಅಡಕೆ 3ನೇ ಕೊಲು ಅಥವಾ ಮಾರ್ಚ್ ನಂತರ ಹೊಸ ಹಾಗೂ ಹಳೇ ಅಡಕೆ ಮಾರುಕಟ್ಟೆ ಮಾತ್ರ ವ್ಯಾವಹಾರಿಕ ಧಾರಣೆಯಲ್ಲಿದ್ದು, 2 ವಿಭಾಗದಲ್ಲಿ ಅಡಕೆ ಧಾರಣೆ ಇರುವುದು ವಾಡಿಕೆ. ಅಕ್ಟೋಬರ್ ಮೊದಲ ವಾರದಿಂದ ಹೊಸ ಕೊಲಿನ ಅಡಕೆ ಮಾರುಕಟ್ಟೆ ಪ್ರವೇಶಿಸುತ್ತಿದ್ದಂತೆ ಹೊಸ ಅಡಕೆ, ಸಿಂಗಲ್ ಚೋಲ್ ಹಾಗೂ ಡಬಲ್ ಚೋಲ್ ಎಂಬ 3 ವಿಭಾಗದಲ್ಲಿ ಧಾರಣೆ ಇರುತ್ತದೆ. ಅಕ್ಟೋಬರ್ ಆರಂಭದಲ್ಲಿ ಹೊಸ ಕೊಲಿನ ಅಡಕೆ ಧಾರಣೆ 180-220 ರೂ. ಇರುವುದು ಸಾಮಾನ್ಯ. ಆದರೆ ಈ ಬಾರಿಯ ಧಾರಣೆ ಬೆಳೆಗಾರರಲ್ಲಿ ಮಂದಹಾಸ ಮೂಡಿಸಿದೆ.
2 ತಿಂಗಳ ಹಿಂದೆ ಅಡಕೆಗೆ 350ರೂ. ಧಾರಣೆ ತಲುಪುತ್ತಿದ್ದಂತೆ ಕರಾವಳಿಯಾದ್ಯಂತ ಅಡಕೆ ಬೆಳೆಗಾರರಲ್ಲಿದ್ದ ದಾಸ್ತಾನು ಬಹುತೇಕ ಖಾಲಿಯಾಗಿದೆ. ಉತ್ತರ ಭಾರತದಲ್ಲೂ ಅಡಕೆಗೆ ಬೇಡಿಕೆ ಹೆಚ್ಚಾಗಿದ್ದು, ಕರಾವಳಿ ಸೇರಿದಂತೆ ವಿವಿಧ ಮೂಲಗಳ ಅಡಕೆ ಬೇಡಿಕೆಯಷ್ಟು ಪೂರೈಕೆ ಸಾಧ್ಯವಾಗದ ಕಾರಣ ಅನಿವಾರ್ಯವಾಗಿ ಹೆಚ್ಚು ಬೆಲೆ ನೀಡಿ ಅಡಕೆ ಖರೀದಿಸುತ್ತಿದ್ದಾರೆ.
ಬುಧವಾರ ಮಾರುಕಟ್ಟೆ ಧಾರಣೆ ಸ್ಥಿರವಾಗಿದೆ. ಕ್ಯಾಂಪ್ಕೊ ಮಾರುಕಟ್ಟೆಯಲ್ಲಿ ಹೊಸ ಅಡಕೆ 275 ರೂ. ಹೊಸ ಅಡಕೆ (ಸಿಂಗಲ್ ಚೋಲ್) 360 ರೂ., ಹಳೇ ಅಡಕೆ (ಡಬಲ್ ಚೋಲ್) 400 ರೂ.ನಲ್ಲಿ ಸ್ಥಿರವಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ 275 ರೂ. ಹೊಸ ಅಡಕೆ (ಸಿಂಗಲ್ ಚೋಲ್) 365-375 ರೂ., ಹಳೇ ಅಡಕೆ (ಡಬಲ್ ಚೋಲ್) 395- 399ರೂ.ಗೆ ಖರೀದಿಯಾಗಿದೆ.