ಅಡಿಕೆ ಆಮದು ಕನಿಷ್ಠ ಬೆಲೆ ನಿಗದಿ ಮಾಡುವಂತೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರಿಗೆ ನಿಯೋಗ ಮನವಿ ಸಲ್ಲಿಸಿತು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ.ಸತ್ಯನಾರಾಯಣ, ಅಡಿಕೆ ಮಹಾಮಂಡಲ ಅಧ್ಯಕ್ಷ ಆರಗ ಜ್ಞಾನೇಂದ್ರ ಮತ್ತಿತರರಿದ್ದರು.
- ಕೇಂದ್ರ ಸಚಿವರಿಗೆ ಕ್ಯಾಂಪ್ಕೊ ನಿಯೋಗ ಮನವರಿಕೆ
ಪುತ್ತೂರು: ಅಡಿಕೆಗೆ ಕನಿಷ್ಠ ಆಮದು ಬೆಲೆ ಹೆಚ್ಚಿಸುವ ಮತ್ತು ಅಕ್ರಮ ಆಮದು ತಡೆಯುವ ಕುರಿತು ನವದೆಹಲಿಯಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರನ್ನು ಸಂಸದರು, ಅಡಕೆ ಮಹಾಮಂಡಲ ಹಾಗೂ ಕ್ಯಾಂಪ್ಕೊ ನಿಯೋಗ ಭೇಟಿಯಾಗಿ, ತುರ್ತು ಕ್ರಮಗಳ ಅಗತ್ಯದ ಬಗ್ಗೆ ಚರ್ಚಿಸಿತು.
ಅಕ್ರಮ ಆಮದಿನಿಂದ ದೇಶಾದ್ಯಂತ ಅಡಿಕೆ ಬೆಳೆಗಾರರ ಜೀವನಾಧಾರಕ್ಕೆ ತೀವ್ರ ದುಷ್ಪರಿಣಾಮ ಬೀರುತ್ತಿವೆ. ಪ್ರತಿನಿಧಿ ಮಂಡಳಿಯು ಅಡಿಕೆ ಬೆಳೆಗಾರರ ಸಮಸ್ಯೆಗಳನ್ನು ಸಚಿವರ ಮುಂದಿಟ್ಟು, ಬೆಳೆಗಾರರನ್ನು ರಕ್ಷಿಸಲು ಮತ್ತು ನ್ಯಾಯಯುತ ಮಾರುಕಟ್ಟೆ ಪರಿಸ್ಥಿತಿಯನ್ನು ಖಾತ್ರಿಪಡಿಸಲು ಕನಿಷ್ಠ ಆಮದು ಬೆಲೆ ಹೆಚ್ಚಿಸುವುದು ಮತ್ತು ಅಕ್ರಮ ಆಮದುಗಳನ್ನು ತಡೆಯುವುದು ಅಗತ್ಯ ಎಂದು ಒತ್ತಾಯಿಸಿದೆ. ಸಚಿವರು ಸಮಸ್ಯೆಗಳನ್ನು ಆಲಿಸಿ, ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ನಿಯೋಗದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ.ಸತ್ಯನಾರಾಯಣ, ಅಡಿಕೆ ಮಹಾಮಂಡಲ ಅಧ್ಯಕ್ಷ ಆರಗ ಜ್ಞಾನೇಂದ್ರ, ತುಮ್ಕೋಸ್ ಅಧ್ಯಕ್ಷ ಶಿವಕುಮಾರ್, ಕ್ಯಾಂಪ್ಕೊ ದೆಹಲಿ ಶಾಖಾ ವ್ಯವಸ್ಥಾಪಕ ಬಿಪಿನ್, ಉಸ್ತುವಾರಿ ಅಧಿಕಾರಿ ಕಾವ್ಯಶ್ರೀ ಮತ್ತಿತರರು ಹಾಜರಿದ್ದರು.
ವಿಜಯವಾಣಿ ವರದಿ
ವಿಜಯವಾಣಿ ೨೦೨೫ ಸೆಫ್ಟೆಂಬರ್‌ನಲ್ಲೇ ಆಮದು ದರ ಹೆಚ್ಚಳದ ಬಗ್ಗೆ ವರದಿ ಮಾಡಿತ್ತು. ಆರ್ಥಿಕ ತಜ್ಞ ಡಾ.ವಿಘ್ನೇಶ್ವರ ವರ್ಮುಡಿ ಅವರು ಕೆ.ಜಿ.ಗೆ ಕನಿಷ್ಠ ೪೨೫ ರೂ. ನಿಗದಿಪಡಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ವರದಿಯ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ಕೆಲದಿನಗಳ ಹಿಂದೆ ಮತ್ತೆ ಹರಿದಾಡಿದ್ದು, ಇದನ್ನು ಗಮನಿಸಿ ನಿಯೋಗ ಭೇಟಿ ಮಾಡಿದೆ ಎಂದು ಹೇಳಲಾಗಿದೆ.