- ಕೇಂದ್ರ, ರಾಜ್ಯ ಸರ್ಕಾರಕ್ಕೆ ಸಂಘ ಆಗ್ರಹ
ಪುತ್ತೂರು: ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತುರ್ತು ಗಮನಹರಿಸಿ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಒತ್ತಾಯಿಸಿದೆ.
ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಸಭೆಯಲ್ಲಿ ಬೆಳೆಗಾರರ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಸೂಕ್ತ ಕ್ರಮಕ್ಕೆ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನ ಸೆಳೆಯಲು ನಿರ್ಧರಿಸಲಾಯಿತು.
ಮಳೆಗಾಲದಲ್ಲಿ ಅಡಿಕೆ ತೋಟಗಳಲ್ಲಿ ಕೊಳೆರೋಗ ನಿಯಂತ್ರಣಕ್ಕೆ ಬಳಸಲಾಗುವ ಬೋರ್ಡೋ ದ್ರಾವಣ ತಯಾರಿಗೆ ಕಾಪರ್ ಸಲೇಟ್ ಮತ್ತು ಸುಣ್ಣ ಅಗತ್ಯವಾಗಿದೆ. ಆದರೆ ಇತ್ತೀಚೆಗೆ ಕಾಪರ್ ಸಲೇಟ್ ದರ ಏರಿಕೆಯಾಗಿರುವುದಲ್ಲದೆ ಕಳಪೆ ಉತ್ಪನ್ನಗಳು ಮಾರುಕಟ್ಟೆಗೆ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಗುಣಮಟ್ಟ ನಿಯಂತ್ರಣಕ್ಕೆ ಸರ್ಕಾರ ಕಟ್ಟುನಿಟ್ಟಿನ ಮಾರ್ಗಸೂಚಿ ಜಾರಿಗೆ ತರಬೇಕು. ಕಾಪರ್ ಸಲೇಟ್‌ಗೆ ನೀಡುತ್ತಿರುವಂತೆ ಪರ್ಯಾಯ ರೋಗ ನಿಯಂತ್ರಣ ಉತ್ಪನ್ನಗಳಿಗೂ ಸಹಾಯಧನ ಒದಗಿಸುವ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಂಘ ಒತ್ತಾಯಿಸಿದೆ.
ಕೋವಿ ಪರವಾನಗಿ ನವೀಕರಣ ಪ್ರಕ್ರಿಯೆಯನ್ನು ಸರಳಗೊಳಿಸಿ ರೈತರಿಗೆ ಅನುಕೂಲವಾಗುವಂತೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಪ್ರಕಟಣೆಯಲ್ಲಿ ಆಗ್ರಹಿಸಿದೆ.
ವಿಳಂಬವಾಗದಿರಲಿ ವಿಮಾ ಪರಿಹಾರ
ಹವಾಮಾನ ಆಧಾರಿತ ಅಡಿಕೆ ಬೆಳೆ ವಿಮೆ ಪ್ರೀಮಿಯಂ ಪಾವತಿಗೆ ಜುಲೈ ಅಂತ್ಯದವರೆಗೆ ಅವಕಾಶ ನೀಡಿರುವುದನ್ನು ಸ್ವಾಗತಿಸಿರುವ ಸಂಘ, ಹವಾಮಾನ ವೈಪರೀತ್ಯದಿಂದ ಉಂಟಾಗುವ ನಷ್ಟಗಳಿಗೆ ಸೂಕ್ತ ಪರಿಹಾರ ಮತ್ತು ವಿಮೆ ಸೌಲಭ್ಯ ದೊರೆಯುವಂತೆ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ಈಗಿನಿಂದಲೇ ಕ್ರಮ ಕೈಗೊಳ್ಳಬೇಕು. ಕಳೆದ ಬಾರಿಯಂತೆ ಈ ಬಾರಿಯೂ ವಿಳಂಬ ಮಾಡಬಾರದು ಎಂದು ಸಂಘ ಆಗ್ರಹಿಸಿದೆ.
ಆಮದು ನಿಷೇಧಿಸಲಿ
ಅಕ್ರಮ ಮಾರ್ಗಗಳ ಮೂಲಕ ಕಳಪೆ ಅಡಿಕೆ ಆಮದು ಆಗುತ್ತಿರುವುದರಿಂದ ದೇಶೀಯ ಮಾರುಕಟ್ಟೆ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕಳಪೆ ಅಡಿಕೆ ಆಮದು ನಿಷೇಧಕ್ಕೆ ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಪ್ರಸ್ತುತ ವೈಜ್ಞಾನಿಕ ಅಧ್ಯಯನ ಪ್ರಕಾರ ಅಡಿಕೆ ಉತ್ಪಾದನಾ ವೆಚ್ಚ ಪ್ರತಿ ಕೆ.ಜಿ.ಗೆ ೪೫೦ ರೂ. ತಲುಪಿದೆ. ಹೀಗಾಗಿ ಅಡಿಕೆಗೆ ಕನಿಷ್ಠ ಆಮದು ದರವನ್ನು ೪೫೧ ರೂ. ಗೆ ಏರಿಸಿ ದೇಶೀಯ ಬೆಳೆಗಾರರ ಹಿತಾಸಕ್ತಿ ರಕ್ಷಿಸಬೇಕು ಎಂದು ಅಡಿಕೆ ಬೆಳೆಗಾರರ ಸಂಘ ಆಗ್ರಹಿಸಿದೆ.