ಪುತ್ತೂರು ಎಪಿಎಂಸಿಯಲ್ಲಿ ನಡೆದ ಸಭೆಯಲ್ಲಿ ಪುತ್ತೂರು ಅಡಿಕೆ ವರ್ತಕರ ಸಂಘದ ಅಧ್ಯಕ್ಷ ರವೀಂದ್ರನಾಥ ರೈ ಬಳ್ಳಮಜಲು ಮಾತನಾಡಿದರು. ಗಂಗಾಧರ ಗೌಡ, ಕೆ.ಎ.ಸಿದ್ದೀಕ್ ಇದ್ದರು. 
ಜಿಲ್ಲೆ

ಒಗ್ಗಟ್ಟಿನಿಂದ ಸಮಸ್ಯೆ ಎದುರಿಸಬೇಕು ARECANUT

ನಿಶಾಂತ ಎನ್ ಬಿಲ್ಲಂಪದವು

ಪ್ರಮುಖ ಮುಖ್ಯಾಂಶಗಳು

  • ರವೀಂದ್ರನಾಥ ರೈ ಬಳ್ಳಮಜಲು ಹೇಳಿಕೆ
  • ಅಡಿಕೆ ವರ್ತಕರ ಸಂಘ ಸಭೆ
ಪುತ್ತೂರು: ಅಡಿಕೆ ವರ್ತಕರು ಸರ್ಕಾರಕ್ಕೆ ನ್ಯಾಯಬದ್ಧ ತೆರಿಗೆ ಪಾವತಿಸಿ ವ್ಯಾಪಾರ ಮಾಡುತ್ತಿದ್ದರೂ, ಅಧಿಕಾರಿ ವರ್ಗ ತೊಂದರೆ ನೀಡುತ್ತಿದೆ. ಅಡಿಕೆ ಲಾರಿಗಳನ್ನು ತಡೆದ ಪರಿಣಾಮ ಧಾರಣೆ ಕುಸಿದು ಕೃಷಿಕರಿಗೂ ತೊಂದರೆಯಾಗುವ ಜತೆಗೆ ರಾಜ್ಯದ ಆರ್ಥಿಕ ಪರಿಸ್ಥಿತಿಗೂ ಹೊಡೆತ ಬೀಳಲಿದೆ. ಹೀಗಾಗಿ ಇಂತಹ ಸಮಸ್ಯೆಯನ್ನು ನಾವು ಒಗ್ಗಟ್ಟಿನಿಂದ ಎದುರಿಸುವುದು ಅಗತ್ಯ ಎಂದು ಪುತ್ತೂರು ಅಡಿಕೆ ವರ್ತಕರ ಸಂಘದ ಅಧ್ಯಕ್ಷ ರವೀಂದ್ರನಾಥ ರೈ ಬಳ್ಳಮಜಲು ಹೇಳಿದರು.
ರಾಸಾಯನಿಕ ಬೆರೆಸಿರುವ ಆರೋಪದ ಮೇಲೆ ಕರ್ನಾಟಕದಿಂದ ಅಡಿಕೆ ಸಾಗಿಸುತ್ತಿದ್ದ ಲಾರಿಗಳನ್ನು ಮಹಾರಾಷ್ಟ್ರದಲ್ಲಿ ಅಧಿಕಾರಿಗಳು ತಡೆದಿದ್ದರಿಂದ ಅಡಿಕೆ ಮಾರುಕಟ್ಟೆಗೆ ಹೊಡೆತ ಬಿದ್ದಿರುವ ಹಿನ್ನೆಲೆಯಲ್ಲಿ, ಪುತ್ತೂರು ಅಡಿಕೆ ವರ್ತಕರ ಸಂಘ ಶನಿವಾರ ಎಪಿಎಂಸಿ ರೈತ ಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.
ಮಾಜಿ ಅಧ್ಯಕ್ಷ ಶಕೂರ್ ಹಾಜಿ ಮಾತನಾಡಿ, ಈ ವಿಚಾರವನ್ನು ಪ್ರತಿಯೊಬ್ಬ ವರ್ತಕನೂ ಗಂಭೀರವಾಗಿ ಪರಿಗಣಿಸಬೇಕಿಕು. ನಾವು ಸಂಘಟಿತವಾಗಿದ್ದಾಗ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು.
ಲಾರಿಗಳನ್ನು ತಡೆದಿರುವುದರಿಂದ ಅಡಿಕೆ ವರ್ತಕರ ಜತೆಗೆ ಕ್ಯಾಂಪ್ಕೊ ಸಂಸ್ಥೆಗೂ ತೊಂದರೆಯಾಗಲಿದ್ದು, ವರ್ತಕರ ನಿಯೋಗ ಕ್ಯಾಂಪ್ಕೊಗೆ ಭೇಟಿ ನೀಡಿ ಮಾತುಕತೆ ನಡೆಸುವಂತೆ ಸದಸ್ಯರು ಸಲಹೆ ನೀಡಿದರು. ವರ್ತಕರ ಜಿಲ್ಲಾ ಸಂಘದ ಜತೆ ಚರ್ಚಿಸಿ ಬಂದ್ ನಡೆಸುವುದಾದರೆ ಜತೆಯಾಗಿ ಮಾಡೋಣ, ಇಲ್ಲದಿದ್ದರೆ ಮೂರು ದಿನಗಳ ಕಾಲ ಕಾದುನೋಡಿ ಜೂ.೨೪ರಂದು ಬಂದ್ ಮಾಡುವ ಕುರಿತು ತೀರ್ಮಾನ ಕೈಗೊಳ್ಳೋಣ. ಶಾಸಕರು, ಸಂಸದರನ್ನು ಕೂಡ ಭೇಟಿ ಮಾಡಿ ಸಮಸ್ಯೆ ಹೇಳಿ ಪರಿಹಾರಕ್ಕೆ ಒತ್ತಾಯಿಸೋಣ ಎಂದು ವರ್ತಕ ಸದಸ್ಯರು ಸಲಹೆ ನೀಡಿದರು.
ಸಂಘದ ಗಂಗಾಧರ ಗೌಡ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಕೆ.ಎ.ಸಿದ್ದೀಕ್ ಕಾರ್ಯಕ್ರಮ ನಿರ್ವಹಿಸಿದರು.