ಜಿಲ್ಲೆ

‘ಅಡಕೆ ಹಾಳೆಯಿಂದ ಕ್ಯಾನ್ಸರ್’ ತರ್ಕವೇ ಹಾಸ್ಯಾಸ್ಪದ

ವಿರೂಪಾಕ್ಷಯ್ಯ ಗುದ್ನಯ್ಯನವರಮಠ

ಶಿರಸಿ: ಅಡಕೆ ಹಾಳೆಯಿಂದ ತಯಾರಿಸಿದ ಪರಿಸರ ಸ್ನೇಹಿ ಊಟದ ತಟ್ಟೆ, ಲೋಟ ಬಳಕೆಯಿಂದ ಕ್ಯಾನ್ಸರ್ ಬರುತ್ತದೆ ಎಂಬ ತರ್ಕವೇ ಹಾಸ್ಯಾಸ್ಪದ. ಅಮೆರಿಕಾಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮನವರಿಕೆ ಮಾಡಿಕೊಟ್ಟು, ಈ ಉತ್ಪನ್ನಗಳ ಮೇಲೆ ಹೇರಲಾಗಿರುವ ನಿಷೇಧವನ್ನು ವಾಪಸ್ ತೆಗೆಸಬೇಕು ಎಂದು ಕೃಷಿ ಆರ್ಥಿಕ ತಜ್ಞ ಹಾಗೂ ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ. ಪ್ರಕಾಶ ಕಮ್ಮರಡಿ ಹೇಳಿದರು. ನಗರದ ಟಿಎಸ್​ಎಸ್ ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ಅಡಕೆ ಉತ್ಪನ್ನಗಳ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು. ಅಡಕೆ ಕ್ಯಾನ್ಸರ್ ಕಾರಕವಲ್ಲ. ಅಡಕೆ ಹಾಳೆಯಿಂದ ತಯಾರಿಸಿದ ಉತ್ಪನ್ನ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ ಎಂಬುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಅವರು, ಅಮೆರಿಕಾ ಸಂಯುಕ್ತ ಸಂಸ್ಥಾನದ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆ ಅಡಕೆ ಹಾಳೆ ಉತ್ಪನ್ನಗಳನ್ನು ನಿಷೇಧಿಸಿದೆ. ಇವುಗಳ ಬಳಕೆಯಿಂದ ಅಡಕೆಯೊಳಗಿನ ಅತ್ಯಂತ ನೈಸರ್ಗಿಕ ಅಂಶವಾದ ಕ್ಷಾರ ಅಥವಾ ಚೊಗರು ತಿನ್ನುವ ಆಹಾರದೊಳಗೆ ಸೇರಿ ಆರೋಗ್ಯಕ್ಕೆ ಹಾನಿಕಾರಕ, ಕ್ಯಾನ್ಸರ್​ಗೂ ಕಾರಣವಾಗಬಹುದು ಎಂಬ ಅರ್ಥಹೀನ ಹಾಗೂ ಹಾಸ್ಯಾಸ್ಪದ ಕಾರಣ ನೀಡಿದೆ. ಯವುದೇ ವೈಜ್ಞಾನಿಕ ಸಂಶೋಧನೆ ಇಲ್ಲದೇ ಇಂಥಹ ಕ್ರಮ ತೆಗೆದುಕೊಂಡಿದೆ. ಇದು ಜಾಗತಿಕ ಮಟ್ಟದಲ್ಲಿ ಅಡಕೆ ವಿರುದ್ಧ ಒಂದು ದೊಡ್ಡ ಸಂಚು ಎಂದು ಆರೋಪಿಸಿದರು. ಅಡಕೆ ಮಧುಮೇಹ, ವೃದ್ಧಾಪ್ಯದ ಮರೆವು ಅಲ್ಲದೆ, ಕೆಲ ವಿಧದ ಕ್ಯಾನ್ಸರ್​ಗೂ ಪರಿಹಾರ ಎಂಬುದು ಉನ್ನತ ಸಂಶೋಧನೆಗಳಿಂದ ಸ್ಪಷ್ಟವಾಗಿದೆ. ಹಾಗಿದ್ದರೂ ಇದರ ಬಳಕೆಯಿಂದ ಆರೋಗ್ಯಕ್ಕೆ ದುಷ್ಪರಿಣಾಮ ಮಾತ್ರವಲ್ಲ ಕ್ಯಾನ್ಸರ್​ಗೂ ಕಾರಣವಾಗುತ್ತದೆ ಎಂಬ ಅಪಪ್ರಚಾರ ಮಾಡಲಾಗುತ್ತಿದೆ. ಅಡಕೆ ಕ್ಯಾನ್ಸರ್​ಕಾರಕವಲ್ಲ ಎಂದು ದೃಢಪಡಿಸುವ ಸಂಶೋಧನೆ ಮಾಡುವ ಬದಲು ಅಡಕೆಯಲ್ಲಿರುವ ಆರೋಗ್ಯ ಹಾಗೂ ಔಷಧಿಯ ಗುಣಗಳ ಬಗ್ಗೆ ನಾವು ಪೇಟೆಂಟ್ ಪಡೆಯಬೇಕು ಎಂದು ಆಗ್ರಹಿಸಿದರು. ಅಡಕೆ ಆಹಾರ ವಸ್ತು. ಅದು ಹಿಂದೆ ಅಗೆದು ಅಗೆದು ತಿನ್ನುವ ಆಹಾರವಾಗಿತ್ತು. ಅದೀಗ ಜಗಿದು ಜಗಿದು ಉಗುಳುವ ಸ್ಥಿತಿಗೆ ಬಂದಿದೆ. ಅಡಕೆ ಬಳಕೆಯ ಪರಿವರ್ತನೆ ಆಧಾರದಲ್ಲಿ ಅಡಕೆ ಬೆಲೆಗಷ್ಟೇ ನಾವು ಚಿಂತನೆ ನಡೆಸಿದ್ದೇವೆ. ಬೆಲೆ ವ್ಯಾಮೋಹದಿಂದ ಹೊರಬಂದು ಬೆಳೆಗಾರರು, ಬೆಳೆಗಾರ ಸಂಸ್ಥೆಗಳು, ಜನಪ್ರತಿನಿಧಿಗಳು ಜಾಗೃತರಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಅಡಕೆಯ ಕಳಂಕ ದೂರ ಮಾಡಬೇಕು. ಅಮೆರಿಕಾದ ಈ ಏಕಪಕ್ಷೀಯ ಕ್ರಮ ವಿಶ್ವವ್ಯಾಪಾರ ಒಪ್ಪಂದಕ್ಕೆ ಹೊಂದಿಕೆಯಾಗುತ್ತದೆಯೇ? ಅಡಕೆ ಹಾಳೆ ತಟ್ಟೆಗಳ ಬಳಕೆಯಿಂದ ಆಹಾರ ಮಲಿನವಾಗಿ ಆರೋಗ್ಯಕ್ಕೆ ಹಾನಿಕಾರಕ ಎಂಬುದರ ಬಗ್ಗೆ ಸ್ಪಷ್ಟ ವೈಜ್ಞಾನಿಕ ಪುರಾವಣೆಗಳನ್ನು ಆ ದೇಶದಿಂದ ಪಡೆಯಬೇಕು. ದೇಶದ ಪ್ರತಿಷ್ಠಿತ ಆಹಾರ, ಆರೋಗ್ಯ, ಕೃಷಿ ವಿಚಾರಗಳ ಮೇಲೆ ಉನ್ನತ ಸಂಶೋಧನೆ ನಡೆಸುತ್ತಿರುವ ಸಂಸ್ಥೆಗಳ ಸಹಾಯದಿಂದ ಅಡಕೆ ಮೇಲಿನ ಈ ಅಪಪ್ರಚಾರಕ್ಕೆ ಸಂಪೂರ್ಣ ತಡೆ ಹಾಕಬೇಕು ಎಂದು ಆಗ್ರಹಿಸಿದರು. ಟಿಎಸ್​ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ವಿಜ್ಞಾನಿ ತೇಜಸ್ವಿನಿ ಪ್ರಕಾಶ, ಮಂಜುನಾಥ ಶಿವಮೊಗ್ಗ, ಪರಿಸರ ಬರಹಗಾರ ಶಿವಾನಂದ ಕಳವೆ ಇತರರಿದ್ದರು.

ಅಡಕೆ ಕುರಿತು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಮನವಿಗೆ ಅಡಕೆ ಬೆಳೆಯುವ ಪ್ರದೇಶದಲ್ಲಿ ಹುಟ್ಟಿ ಬೆಳೆದು ವಿದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು, ವಿಜ್ಞಾನಿಗಳು, ಶೈಕ್ಷಣಿಕ ವಲಯದ ಪ್ರಮುಖರೂ ಅನುಮೋದಿಸಿದ್ದಾರೆ. ಕೇಂದ್ರ ಸರ್ಕಾರ ವಾಣಿಜ್ಯ ಕಾರ್ಯದರ್ಶಿಗಳ ಮೂಲಕ ಅಮೆರಿಕಾವನ್ನು ಪ್ರಶ್ನಿಸಬೇಕು. ಡಾ. ಪ್ರಕಾಶ ಕಮ್ಮರಡಿ ಕೃಷಿ ಆರ್ಥಿಕ ತಜ್ಞ