ಸಾಂದರ್ಭಿಕ ಚಿತ್ರ 
ಜಿಲ್ಲೆ

ಬಂದರು ಗೋದಾಮುನಿಂದ 40 ಸಾವಿರ ರೂ. ಮೌಲ್ಯದ ಅಡಿಕೆ ಕಳವು

ಮಂಗಳೂರು: ನಗರದ ಬಂದರಿನ ಗೋದಾಮು ಒಂದರಲ್ಲಿ ಇರಿಸಲಾಗಿದ್ದ ಸುಮಾರು 40 ಸಾವಿರ ರೂ. ಮೌಲ್ಯದ 190 ಕೆ.ಜಿ. ಅಡಿಕೆಯನ್ನು ಕಳ್ಳರು ಕಳವು ಮಾಡಿರುವ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಬ್ರಾಹಿಂ ನಝೀಮ್ ಎಂಬವರು ನಗರದ ಬಂದರಿನ ಅನ್ಸಾರಿ ರಸ್ತೆಯ ಯತೀಮ್ ಖಾನ್ ಹಾಲ್ ಹಿಂಭಾಗದಲ್ಲಿ ಸಮೀರ ಟ್ರೇಡಿಂಗ್ ಕಂಪನಿ ಎಂಬ ಹೆಸರಿನಲ್ಲಿ ಅಡಿಕೆ ವ್ಯಾಪಾರದ ಬಾಡಿಗೆಯ ಗೋದಾಮು ಹೊಂದಿದ್ದಾರೆ. ಆ.14ರಂದು ಸಂಜೆ 5.30ಕ್ಕೆ ಗೋದಾಮು ಬಂದ್ ಮಾಡಿ ಹೋಗಿದ್ದಾರೆ. 15ರಂದು ಬೆಳಗ್ಗೆ 9 ಗಂಟೆಗೆ ಬಂದು ನೋಡಿದಾಗ ಅಡಿಕೆ ಕಳವು ಆಗಿರುವುದು ತಿಳಿದು ಬಂದಿದೆ.
ಯಾರೋ ಕಳ್ಳರು ಈ ಅವಧಿಯಲ್ಲಿ ಗೋದಾಮಿನ ಮಾಡಿನ ಹೆಂಚನ್ನು ತೆಗೆದು ಒಳಗಿದ್ದ ಅಡಿಕೆ ಗೋಣಿಗಳ ಪೈಕಿ 190 ಕೆ.ಜಿಯನ್ನು ಕಳವು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಬಂದರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ತನಿಖೆ ಆರಂಭಿಸಿದ್ದಾರೆ.