ಜಿಲ್ಲೆ

ಅಡಕೆಗೆ ಬಲ ನೀಡಲು ಒತ್ತಡ: ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ಅಡಕೆ ಕಾರ್ಯಪಡೆ

ಬೆಂಗಳೂರು: ಅಡಕೆ ಆರೋಗ್ಯಕ್ಕೆ ಹಾನಿಕರ ಎಂಬ ಹಣೆಪಟ್ಟಿ ಕಳಚಿ, ರಾಜ್ಯದ ಅಡಕೆ ಬೆಳೆಗಾರರ ಆತಂಕ ದೂರ ಮಾಡಬೇಕೆಂಬ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಶುರುವಾಗಿದೆ.

ಸಿಎಂ ಯಡಿಯೂರಪ್ಪ ಅವರನ್ನು ಗುರುವಾರ ಭೇಟಿ ಮಾಡಿದ ಅಡಕೆ ಕಾರ್ಯಪಡೆ ಸದಸ್ಯರು, ಸರ್ಕಾರ ತಕ್ಷಣಕ್ಕೆ ನೀಡಬೇಕಾದ ಆದ್ಯತೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಜತೆಗೆ ಆಯವ್ಯಯದಲ್ಲಿ ಆದ್ಯತೆ ನೀಡಲು ಒತ್ತಾಯಿಸಿದರು. ಅಡಕೆ ವಿಚಾರ ಸುಪ್ರೀಂಕೋರ್ಟ್ ನಲ್ಲಿದ್ದು, ವಾದ ಮಾಡಲು ಹಿರಿಯ ವಕೀಲರ ನೇಮಿಸಬೇಕೆಂದು ಒತ್ತಾಯಿಸಿದರು. ಸಿಎಂ ಇದಕ್ಕೆ ಸಹಮತ ವ್ಯಕ್ತಪಡಿಸಿದರು ಎಂದು ಹಿರಿಯ ಸಹಕಾರಿ ಮಂಜಪ್ಪ ಸಿಎಂ ಭೇಟಿ ಬಳಿಕ ವಿಜಯವಾಣಿಗೆ ತಿಳಿಸಿದರು. ಹಿಂದಿನ ಸರ್ಕಾರ ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಮಾಣಪತ್ರದ ಪ್ರಕಾರ ಅಡಕೆ ಆರೋಗ್ಯಕ್ಕೆ ಹಾನಿಕರ ಎಂದೇ ನಮೂದಾಗಿದೆ. ಮೊದಲು ಇದನ್ನು ತೆಗೆಸುವ ಕೆಲಸ ಆಗಬೇಕಾಗಿದೆ. ತಜ್ಞರ ತಂಡ ರಚಿಸಿ, ಕ್ಲಿನಿಕಲ್ ರಿಪೋರ್ಟ್ ಪಡೆದುಕೊಂಡು ಅಡಕೆ ಹಾನಿಕಾರಕವಲ್ಲ ಎಂಬ ಸಂಗತಿಯನ್ನು ನ್ಯಾಯಾಲಯಕ್ಕೆ ಮನದಟ್ಟು ಮಾಡಿಕೊಡಬೇಕಿದೆ. ಈ ವಿಚಾರವನ್ನೂ ಸಿಎಂಗೆ ತಿಳಿಸಿದ್ದೇವೆ. ಅಡಕೆ ಯನ್ನು ಅನೇಕ ರೋಗಗಳು ಬಾಧಿಸುತ್ತಿದ್ದು, ಸಂಶೋಧನೆ ಅಗತ್ಯವಿದೆ. ಈ ಕಾರಣಕ್ಕೆ ಮುಂದಿನ ಆಯವ್ಯಯದಲ್ಲಿ ಸಂಶೋಧನೆಗೆ ಮತ್ತು ಇತರ ಚಟುವಟಿಕೆಗೆ 10 ಕೋಟಿ ರೂ.ಗಳನ್ನಾದರೂ ಮೀಸಲಿಡುವ ಅಗತ್ಯವಿದೆ ಎಂದು ತಿಳಿಸಿದ್ದೇವೆ ಎಂದರು.

ಟಾಸ್ಕ್​ಫೋರ್ಸ್ ಅಧ್ಯಕ್ಷ ಆರಗ ಜ್ಞಾನೇಂದ್ರ, ಸದಸ್ಯರಾದ ಮಂಜಪ್ಪ, ಕೊಂಕೋಡಿ ಪದ್ಮನಾಭ, ಹರಿಪ್ರಕಾಶ ಕೋಣೆಮನೆ ಸೇರಿ ತುಮ್ಕೋಸ್, ಮ್ಯಾಮ್ಕೋಸ್ ಪ್ರತಿನಿಧಿಗಳು ನಿಯೋಗದಲ್ಲಿದ್ದರು.

ಅಡಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂಬುದನ್ನು ಸಂಶೋಧನೆ ಮೂಲಕ ದೃಢೀಕರಿಸುವ ಅಗತ್ಯವಿದೆ ಎಂಬ ಸಂಗತಿಯನ್ನು ಮುಖ್ಯಮಂತ್ರಿಯವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಅವರು ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. | ಆರಗ ಜ್ಞಾನೇಂದ್ರ ಅಡಕೆ ಕಾರ್ಯಪಡೆ ಅಧ್ಯಕ್ಷ