ಜಿಲ್ಲೆ

6ರಂದು ಮಂಗಳೂರಲ್ಲಿ 'ಅರೆಭಾಷೆ ಪದಕೋಶ' ಬಿಡುಗಡೆ

Dakshina Kannada

ಮಂಗಳೂರು: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸಂಪಾದಿಸಿರುವ ಅರೆಭಾಷೆ ಪದಕೋಶ, ಅರೆಭಾಷೆ- ಕನ್ನಡ- ಇಂಗ್ಲಿಷ್ ತ್ರಿಭಾಷಾ ಡಿಕ್ಷನರಿ ಬಿಡುಗಡೆ ಕಾರ್ಯಕ್ರಮ ಮತ್ತು ಅಳಿವಿನಂಚಿನ ಭಾಷೆ-ರಾಷ್ಟ್ರೀಯ ವಿಚಾರಗೋಷ್ಠಿ ಆ.6ರಂದು ಬೆಳಗ್ಗೆ 10.30ಕ್ಕೆ ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ನಡೆಯಲಿದೆ.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಸಂತ ಅಲೋಶಿಯಸ್ ಕಾಲೇಜು ಮಂಗಳೂರು, ಕರಾವಳಿ ವಿಕಿಮೀಡಿಯನ್ಸ್ ಯೂಸರ್ ಗ್ರೂಪ್, ಸಿಐಎಸ್-ಎ2ಕೆ ಬೆಂಗಳೂರು ಇದರ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸೇಂಟ್‌ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ರೆ.ಡಾ.ಪ್ರವೀಣ್ ಮಾರ್ಟಿಸ್ ಎಸ್.ಜೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ ರೈ ಪದಕೋಶ ಬಿಡುಗಡೆ ಮಾಡುವರು. ಮದ್ರಾಸು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಚೆ.ರಾಮಸ್ವಾಮಿ ಪದಕೋಶದ ಕುರಿತಂತೆ ಮಾತನಾಡವರು. ಸಂತ ಅಲೋಶಿಯಸ್ ವಿದ್ಯಾಸಂಸ್ಥೆಗಳ ರೆಕ್ಟರ್ಮೆಲ್ವಿನ್ ಜೋಸ್ ಪಿಂಟೋ ಎಸ್.ಜೆ. ಆಶೀರ್ವಚನ ನೀಡುವರು ಎಂದವರು ತಿಳಿಸಿದರು.

ಮಧ್ಯಾಹ್ನ 1.30ರ ನಂತರ ‘ಅಳಿವಿನಂಚಿನಲ್ಲಿರುವ ಸಣ್ಣ ಭಾಷೆಗಳು ಮತ್ತು ಡಿಕ್ಷನರಿ’ ಕುರಿತಂತೆ ಪ್ರೊ.ಚೆ.ರಾಮಸ್ವಾಮಿ, ‘ಅಳಿವಿನಂಚಿನ ಭಾಷೆ ಮತ್ತು ಯೋಜನೆಗಳು’ ವಿಷಯದ ಕುರಿತಂತೆ ವಿಕಿಮೀಡಿಯ ಫೌಂಡೇಶನ್ ಉದ್ಯೋಗಿ ತನ್ವೀರ್ ಹಸನ್, ಡಿಜಿಟಲೀಕರ್ ಮುಕ್ತಜ್ಞಾನ, ಯುನಿಕೋಡ್ ಮತ್ತು ಭಾಷೆ ವಿಷಯದ ಕುರಿತಂತೆ ಸಂಪನ್ಮೂಲ ವ್ಯಕ್ತಿ ಓಂ ಪ್ರಕಾಶ್ ಮಾತನಾಡಲಿದ್ದಾರೆ. ಸಂಜೆ 3.45ರಿಂದ ತುಳು ವಿಕಿಪೀಡಿಯ ಸಾಧನೆ ಮತ್ತು 7ನೇ ವರ್ಷದ ಸಂಭ್ರಮದ ಬಗ್ಗೆ ಡಾ.ವಿಶ್ವನಾಥ ಬದಿಕಾನ ಮಾತನಾಡುವರು ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ವಿವರ ನೀಡಿದರು.

ಪ್ರಸ್ತುತ ಅರೆ ಭಾಷೆ ಪದಕೋಶದಲ್ಲಿ 1500ಕ್ಕಿಂತ ಹೆಚ್ಚು ಗಾದೆಗಳು, 750ಕ್ಕಿಂತ ಹೆಚ್ಚು ಒಗಟುಗಳ ನುಡಿಗಟ್ಟುಗಳು ಹಾಗೂ 18 ಸಾವಿರ ಪದಗಳಿಗೂ ಪ್ರಯೋಗ ವಾಕ್ಯಗಳನ್ನು ನೀಡಲಾಗಿದೆ. ಪದಕೋಶದಲ್ಲಿ 900ಕ್ಕಿಂತ ಹೆಚ್ಚು ಮನೆತನ, 1000ಕ್ಕಿಂತ ಹೆಚ್ಚು ಸ್ಥಳನಾಮ ಹಾಗೂ 150ಕ್ಕಿಂತ ಹೆಚ್ಚು ವ್ಯಕ್ತಿನಾಮಗಳು ಇವೆ ಎಂದವರು ತಿಳಿಸಿದರು.

ಸಂಯೋಜಕರಾದ ಡಾ.ವಿಶ್ವನಾಥ ಬದಿಕಾನ, ಭರತೇಶ ಅಲಸಂಡೆಮಜಲು, ಅಲೋಶಿಯಸ್ ಸ್ವಾಯತ್ತ ಕಾಲೇಜೀನ ರಿಜಿಸ್ಟ್ರಾರ್ ಡಾ.ಆಲ್ವಿನ್ ಡೇಸಾ ಉಪಸ್ಥಿತರಿದ್ದರು.