ಜಿಲ್ಲೆ

ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ವಿಭಿನ್ನ; ವಿಶ್ವನಾಥ ಬದಿಕಾನ

reportermys

ಮಡಿಕೇರಿ: ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯವು ಕೊಡಗು, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಪ್ರದೇಶದಲ್ಲಿ ವಿಭಿನ್ನವಾಗಿದೆ ಎಂದು ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ವಿಶ್ವನಾಥ ಬದಿಕಾನ ಹೇಳಿದರು.


ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಪ್ರಕಟಿಸಲಾಗಿರುವ ಅರೆಭಾಷೆ ವಿಶ್ವಕೋಶ ಹಾಗೂ ಗ್ರಾಂಥಿಕ ಕನ್ನಡ ಮತ್ತು ಅರೆಭಾಷೆ ತೌಲನಿಕ ವ್ಯಾಕರಣ, ಅರೆಭಾಷೆ ಕೈಪಿಡಿ, ನಾಟಕ ಕತೆ, ಲಲಿತ ಪ್ರಬಂಧ, ಅರೆಭಾಷೆ ಸಾಧಕರ ಮಾಲೆ ಸೇರಿದಂತೆ ಒಟ್ಟು ೧೪ ಪುಸ್ತಕಗಳನ್ನು ನಗರದ ಭಾರತೀಯ ವಿದ್ಯಾಭವನದಲ್ಲಿ ಬಿಡುಗಡೆ ಮಾಡಿ ಮಾತನಾಡಿದರು.

ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ವಿಭಿನ್ನವಾಗಿದೆ. ಆ ನಿಟ್ಟಿನಲ್ಲಿ ಈಗ ಪ್ರಕಟಿಸಲಾಗಿರುವ ಪುಸ್ತಕಗಳು ಸಹ ಆಯಾಯ ಪ್ರದೇಶದ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಒಳಗೊಂಡಿದೆ. ಅರೆಭಾಷೆ ಅಕಾಡೆಮಿಯಿಂದ ಹೊರತರಲಾದ ಪುಸ್ತಕಗಳು ಅರೆಭಾಷೆ ಸಂಸ್ಕೃತಿ ಮತ್ತು ಇತಿಹಾಸವನ್ನು ತಿಳಿದುಕೊಳ್ಳುವ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಒಳಗೊಂಡಿದೆ. ಆ ಹಿನ್ನೆಲೆಯಲ್ಲಿ ಎಲ್ಲರೂ ಅರೆಭಾಷೆಯನ್ನು ಕಟ್ಟಿ ಬೆಳೆಸುವಂತಾಗಬೇಕು. ಪದಕೋಶ, ವಿಶ್ವಕೋಶ, ಪಾರಂಪರಿಕ ವಸ್ತುಕೋಶ ಹೀಗೆ ಹಲವು ಪುಸ್ತಕಗಳು ಜತನ ಮಾಡಿಕೊಂಡು ಓದುವ ಪುಸ್ತಕವಾಗಿದೆ ಎಂದು ಹೇಳಿದರು.


ಮೈಸೂರು ವಿಶ್ವವಿದ್ಯಾಲಯ ವಿಶ್ರಾಂತ ಪ್ರಾಧ್ಯಾಪಕ ಡಾ.ಹಾ.ತಿ.ಕೃಷ್ಣೇಗೌಡ ಮಾತನಾಡಿ, ವೈವಿದ್ಯತೆಯಲ್ಲಿ ಏಕತೆ ಹೊಂದಿರುವ ಭಾರತ ದೇಶದಲ್ಲಿ ಸಂಸ್ಕೃತಿಯ ಜ್ಞಾನವನ್ನು ಗಳಿಸಿಕೊಂಡು ಹೋಗಬೇಕು. ಆ ನಿಟ್ಟಿನಲ್ಲಿ ಅರೆಭಾಷೆ ಅಕಾಡೆಮಿ ವತಿಯಿಂದ ಹೊರತರಲಾಗಿರುವ ’ವಿಶ್ವಕೋಶ’ ಪುಸ್ತಕವು ಒಂದು ಗ್ರಂಥವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ಮೈಸೂರು ಶೇಷಾದ್ರ್ರಿಪುರಂ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಸಿ.ಪಿ.ಲಾವಣ್ಯ ಕೊಟ್ಟಕೇರಿಯನ ಮಾತನಾಡಿ, ಯಾವುದೇ ಒಂದು ಭಾಷೆ ಜೀವಂತವಾಗಿರಲು ಸಾಹಿತ್ಯ ಮತ್ತು ಸಂಸ್ಕೃತಿ ಬೆಳವಣಿಗೆ ಅತ್ಯಗತ್ಯ. ಸಾಹಿತ್ಯ ಬರೆಯುವುದರ ಜತೆಗೆ ಓದುವುದು ಅತಿಮುಖ್ಯ. ಅರೆಭಾಷೆಯನ್ನು ಮಕ್ಕಳಿಗೆ ಓದಲು ಮತ್ತು ಬರೆಯಲು ತಿಳಿಸಬೇಕು. ಮನೆಯಲ್ಲಿ ಮಾತನಾಡಬೇಕು. ಅರೆಭಾಷೆ ಪುಸ್ತಕಗಳು ಡಿಜಿಟಲೀಕರಣವಾಗಿ ಆನ್‌ಲೈನ್‌ನಲ್ಲಿ ಓದುಲು ಲಭ್ಯವಾಗಬೇಕು ಎಂದು ಸಲಹೆ ಮಾಡಿದರು.


ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮಿ ನಾರಾಯಣ ಕಜೆಗದ್ದೆ ಮಾತನಾಡಿ, ಅಕಾಡೆಮಿ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ನಂತರ ಅಕಾಡೆಮಿ ಸದಸ್ಯರ ಸಹಕಾರದಿಂದ ಕೋವಿಡ್ ೧೯ ನಡುವೆಯು ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಯೋಜನೆಗಳನ್ನು ರೂಪಿಸಿಕೊಂಡು, ಹಲವು ಉತ್ತಮ ಕಾರ್ಯ ಕೈಗೊಳ್ಳಲು ಸಾಧ್ಯವಾಯಿತು. ಅರೆಭಾಷೆಯಲ್ಲಿ ಒಳ್ಳೆಯ ಪುಸ್ತಕ ಪ್ರಕಟಿಸುವುದರ ಜತೆಗೆ ನಾಟಕ, ಯಕ್ಷಗಾನ, ತಾಳಮದ್ದಳೆ ಹೀಗೆ ಹಲವು ಅರೆಭಾಷಿಕ ಸಾಹಿತ್ಯ ಮತ್ತು ಸಂಸ್ಕೃತಿಗೆ ಒತ್ತು ನೀಡಲಾಯಿತು ಎಂದು ಕಜೆಗದ್ದೆ ನುಡಿದರು.


ಕಟ್ರತನ ಲಲಿತಾ ಅಯ್ಯಣ್ಣ(ಗೂಡಿಗೆ ಮರಳಿದ ಹಕ್ಕಿ), ಲೀಲಾ ದಾಮೋದರ ಕುಂದಲ್ಪಾಡಿ(ಗುಬ್ಬಿ ಗೂಡಿನ ಚಿಲಿಪಿಲಿ), ಅರೆಭಾಷೆ ಪ್ರಬಂಧ, ಅರೆಭಾಷೆ ಪದ್ಯ, ಅರೆಭಾಷೆ ಕೈಪಿಡಿ ಇತರ ಪುಸ್ತಕ ಬಿಡುಗಡೆ ಮಾಡಲಾಯಿತು. ಅರೆಭಾಷೆ ಅಕಾಡೆಮಿ ಪ್ರಕಟಿತ ೧೪ ಪುಸ್ತಕಗಳು, ಅಕಾಡೆಮಿಯ ದಶವರ್ಷ ಸ್ಮರಣ ಸಂಚಿಕೆ ಹಾಗೂ ಚಿತ್ರಕಲಾ ಶಿಬಿರದ ನೆನಪಿನ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.


ಅರೆಭಾಷೆ ಸಾಧಕರ ಮಾಲೆ ಪುಸ್ತಕ ಬರೆದಿರುವ ಬಾರಿಯಂಡ ಜೋಯಪ್ಪ, ಅಮೆ ಪಾಲಾಕ್ಷ, ಡಾ.ಪೂವಪ್ಪ ಕಣಿಯೂರು, ಡಾ.ಅನುರಾಧ ಕುರುಂಜಿ, ಅಕಾಡೆಮಿ ಸದಸ್ಯರಾದ ಬೈತಡ್ಕ ಜಾನಕಿ ಬೆಳ್ಯಪ್ಪ, ಸ್ಮಿತಾ ಅಮೃತರಾಜ್, ಚೊಕ್ಕಾಡಿ ಪ್ರೇಮ ರಾಘವಯ್ಯ, ಧನಂಜಯ ಅಗೋಳಿಕಜೆ, ಡಾ.ದಯಾನಂದ ಕೂಡಕಂಡಿ, ಎ.ಟಿ.ಕುಸುಮಾಧರ, ಜಯಪ್ರಕಾಶ್ ಮೊಂಟಡ್ಕ, ಪುರುಷೋತ್ತ ಕಿರ್ಲಾಯ, ಡಾ.ಪುರುಷೋತ್ತಮ ಕರಂಗಲ್ಲು, ಕಿರಣ್ ಕುಂಬಳಚೇರಿ, ಭರತೇಶ್ ಅಲಸಂಡೆಮಜಲು, ರಿಜಿಸ್ಟ್ರಾರ್ ಚಿನ್ನಸ್ವಾಮಿ ಇದ್ದರು.