ಜಿಲ್ಲೆ

ಕೇವಲ ಐದಾರು ನಿಮಿಷದ ಮಳೆಗೆ ಜಲಾವೃತಗೊಂಡ ಪ್ರದೇಶಗಳು

Rest of Bengaluru - Chikkaballapura - Venkatesh

ಚಿಕ್ಕಬಳ್ಳಾಪುರ: ಕೇವಲ ಐದಾರು ನಿಮಿಷ ಸುರಿದ ಮಳೆಗೆ ಜಿಲ್ಲಾ ಕೇಂದ್ರದಲ್ಲಿನ ಎಂ.ಜಿ.ರಸ್ತೆಯ ಪ್ರಮುಖ ಭಾಗಗಳ ಜತೆಗೆ ವಿವಿಧ ಪ್ರದೇಶಗಳು ಜಲಾವೃತಗೊಂಡು ಜನರು ತೊಂದರೆ ಅನುಭವಿಸುವಂತಾಯಿತು.
ದರ್ಗಾ ಮೊಹಲ್ಲಾ, ಗ್ಯಾರೇಜ್ ರಸ್ತೆ, ಹೊಸ ಖಾಸಗಿ ಬಸ್ ನಿಲ್ದಾಣ ಸಮೀಪ ಚರಂಡಿಯಲ್ಲಿನ ನೀರು ತ್ಯಾಜ್ಯದೊಂದಿಗೆ ರಸ್ತೆಗೆ ಹರಿಯಿತು. ಇದರಿಂದ ಟ್ರಾಫಿಕ್ ಜಾಮ್ ಉಂಟಾಯಿತು. ಇದರ ಕಿರಿಕಿರಿಗೆ ಸ್ಥಳಿಯರು ಅಧಿಕಾರಿಗಳಿಗೆ ಇಡೀ ಶಾಪ ಹಾಕಿದರು. ಪ್ರತಿ ಬಾರಿಯೂ ಮಳೆಗಾಲ ಪೂರ್ವ ಸಿದ್ಧತೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದಿಲ್ಲ. ಮಳೆಯ ಆವಾಂತರಗಳಿಗೆ ಹಲವು ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

*ನೀರಿಗೆ ರಸ್ತೆ ಬಂದ್
ಎಂ.ಜಿ.ರಸ್ತೆಯಿಂದ ದರ್ಗಾ ಮೊಹಲ್ಲಾಗೆ ತೆರಳುವ ರಸ್ತೆ, ಎರಡು ಬದಿಯ ಚರಂಡಿಗಳು ಸಂಪೂರ್ಣ ನೀರಿನಲ್ಲಿ ಮುಳುಗಿ ಹೋಗಿದ್ದವು. ಹಾಗೆಯೇ ಮುಖ್ಯ ರಸ್ತೆ, ಆಟೋ ನಿಲ್ದಾಣ, ಉರ್ದು ಶಾಲೆ, ವೇಣುಗೋಪಾಲಸ್ವಾಮಿ ದೇವಾಲಯದ ಕಡೆಗೆ ಹರಿದಿದೆ. ಇದೇ ರೀತಿ ಮಂಚನಬಲೆ ಮಾರ್ಗದ ಬೈಪಾಸ್ ರಸ್ತೆ, ವಾಪಸಂದ್ರ, ಚಾಮರಾಜಪೇಟೆಯ ಅಂಬೇಡ್ಕರ್ ಕಾಲನಿ, ತಗ್ಗು ಪ್ರದೇಶಗಳು ಜಲಾವೃತಗೊಂಡು ಸಮಸ್ಯೆ ಅನುಭವಿಸುವಂತಾಯಿತು.

*ಮಳೆಗಾಲದಲ್ಲಿ ಕಸರತ್ತು
ಮಳೆ ಬೀಳುವ ಸಂದರ್ಭದಲ್ಲಿ ಪ್ರಮುಖ ರಸ್ತೆಗಳು ಹಾಗೂ ಚರಂಡಿಗಳು ಜಲಾವೃತಗೊಂಡು, ತ್ಯಾಜ್ಯದ ಮಿಶ್ರಣದೊಂದಿಗೆ ಗಲೀಜಿನ ವಾತಾವರಣ ನಿರ್ಮಾಣವಾಗಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಪೌರ ಕಾರ್ಮಿಕರು ಪರಿಕರಗಳನ್ನು ತಂದು ತೆರವುಗೊಳಿಸುವ ಕಾರ್ಯಾಚರಣೆ ಕೈಗೊಂಡರು. ಚರಂಡಿಯಲ್ಲಿನ ಹೂಳು ತೆಗೆದು ನೀರು ಸರಾಗವಾಗಿ ಹರಿಯುವಂತಾಗಲು ಕಸರತ್ತು ನಡೆಸಿದರು. ಕೊನೆಗೆ ಒಂದು ಗಂಟೆಯ ಬಳಿಕ ರಸ್ತೆಯ ಮೇಲಿನ ನೀರು ಖಾಲಿಯಾಗಿದ್ದು ಸಮಸ್ಯೆ ತಾತ್ಕಾಲಿಕ ಪರಿಹಾರ ಕಂಡಿತು. ಆದರೆ, ದುರ್ವಾಸನೆ ಹೋಗುತ್ತಿಲ್ಲ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.