ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್  
ಜಿಲ್ಲೆ

ಬಿಜೆಪಿಯಲ್ಲಿ ಗಂಡಸರು ಇರಲ್ವಾ...? ಸಚಿವ ಎಂ.ಬಿ. ಪಾಟೀಲ ಹೀಗೆ ಹೇಳಿದ್ದೇಕೆ?

ವಿಜಯಪುರ: ಕಾಂಗ್ರೆಸ್ ಸಮಾವೇಶದಲ್ಲಿ ಬಿಜೆಪಿಯವರು ಹೆಣ್ಮಕ್ಕಳನ್ನು ಬಳಸಿ ಗಲಾಟೆ ಮಾಡಿಸಿದ್ದಾರೆ. ಗಂಡಸರು ಬರಬೇಕಾಗಿತ್ತಲ್ವಾ..? ಬಿಜೆಪಿಯಲ್ಲಿ ಗಂಡಸರು ಇರಲ್ವಾ ? ಎಂದು ಸಚಿವ ಎಂ.ಬಿ. ಪಾಟೀಲ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರೋಧಿಸಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಬಿಜೆಪಿ ಮಹಿಳೆಯರು ಕಪ್ಪು ಬಾವುಟ ಪ್ರದರ್ಶಿಸಿರುವುದು ಮತ್ತು ಭದ್ರತಾ ವೈಫಲ್ಯದಿಂದ ಆಕ್ರೋಶಗೊಂಡ ಸಿಎಂ ಸಿದ್ದರಾಮಯ್ಯ ಎಎಸ್‌ಪಿ ಮೇಲೆ ಕೈ ಎತ್ತಿದ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಕೈ ಎತ್ತಿಲ್ಲ; ಯಾರು ಎಸ್‌ಪಿ ಎಂದು ಕೈ ತೋರಿಸಿದ್ದಾರಷ್ಟೇ ಎಂದರು.

ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಆಗಮಿಸಿ ಕಪ್ಪು ಬಾವುಟ ಪ್ರದರ್ಶನ ಮಾಡಿದ್ದು ಯಾಕೆ ? ನಾವೂ ಬೇಕಾದ್ದನ್ನು ಮಾಡಬಹುದು. ನಮ್ಮದೇ ಸರ್ಕಾರ ಇದೆ. ನಾಳೆ ಮೋದಿ ಕಾರ್ಯಕ್ರಮದಲ್ಲಿ ನಾವು 50 ಜನ ಹೋಗಿ ಗಲಾಟೆ ಮಾಡಿದರೆ ಹೇಗೆ ? ಎಂದರು.

ಪಾಕ್ ಜೊತೆ ಯುದ್ದವಾಗಲಿ

ಪಾಕ್ ಜೊತೆಗೆ ಯುದ್ಧ ಬೇಡ ಎಂದಿರುವ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಚಿವ ಎಂ.ಬಿ. ಪಾಟೀಲರು, ಸಿಎಂ ಬೇರೆ ಅರ್ಥದಲ್ಲಿ ಹೇಳಿದ್ದಾರೆ. ಯುದ್ದವೊಂದೇ ಪರಿಹಾರವಲ್ಲ ಎಂದಿದ್ದಾರೆ. ಇತರೆ ಎಲ್ಲ ರಾಷ್ಟ್ರಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯುದ್ಧ ಮಾಡಬೇಕು. ಪಾಕ್ ವಿರುದ್ಧ ಯುದ್ದವಾಗಲೇಬೇಕು. ಪಾಕ್‌ಗೆ ತಕ್ಕ ಶಾಸ್ತಿ ಆಗಲೇಬೇಕು ಎಂದರು.

ಈ ಹಿಂದೆ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಕ್ರಮ ಕೈಗೊಂಡ ರೀತಿ ಕ್ರಮ ಆಗಬೇಕು. ಕೇಂದ್ರದ ಜೊತೆಗೆ ಎಲ್ಲ ರಾಜಕೀಯ ಪಕ್ಷಗಳಿವೆ. ಎಚ್ಚರಿಕೆಯಿಂದ, ಪರಿಣಾಮಕಾರಿಯಾಗಿ ಯುದ್ದ ಮಾಡಬೇಕು. ಅಣು ಬಾಂಬ್ ದಾಳಿಯ ಬೆದರಿಕೆ ಹಾಕುತ್ತಿದ್ದು, ಮುನ್ನೆಚ್ಚರಿಕೆ ತೆಗೆದುಕೊಂಡು ಯುದ್ಧ ಮಾಡಲಿ ಎಂದರು.

ಮಾನವೀಯತೆಯಲ್ಲಿ ನಂಬಿಕೆ ಇಟ್ಟವರು ಪಹಲ್ಗಾಮ್ ಘಟನೆ ಖಂಡಿಸಬೇಕು. ಉಗ್ರರು ಮಾಡಿದ್ದು ಹೇಡಿತನದ ಕೃತ್ಯ. ಕಾಶ್ಮೀರಿಗಳು ಭಾರತದ ಪರ, ಶಾಂತಿಯ ಕಡೆಗೆ ಇದ್ದಾರೆ. ಯೂರೋಪ್ ರಾಷ್ಟ್ರಗಳು ನಮ್ಮ ಜೊತೆಗೆ ಇರಬೇಕು. ಚೀನಾ, ಅಮೆರಿಕಾ ಸೇರಿ ಎಲ್ಲರೂ ಪರಸ್ಪರ ಉಗ್ರವಾದವನ್ನ ಖಂಡಿಸಬೇಕು ಎಂದರು.