ಜಿಲ್ಲೆ

ಅಂಗವಿಕಲರೂ ಸಮರ್ಥರೇ

ಬೆಂಗಳೂರು ಗ್ರಾಮಾಂತರ ಡೆಸ್ಕ್

ನೆಲಮಂಗಲ: ಅಂಗವಿಕಲರು ನ್ಯೂನತೆಯ ಬಗ್ಗೆ ಮಾನಸಿಕವಾಗಿ ಕುಗ್ಗದೆ ಆತ್ಮಸ್ಥೆರ್ಯ ಬೆಳೆಸಿಕೊಳ್ಳಬೇಕು ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.

ತಾಲೂಕು ಪಂಚಾಯಿತಿ ಕಾರ್ಯಾಲಯದ ಅವರಣದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿಯಿ ವಿಶೇಷ ಅನುದಾನದಡಿ ಅಂಗವಿಕಲರಿಗೆ ತ್ರಿಚಕ್ರ ವಾಹ ವಿತರಣೆ ಮಾಡಿ ಮಾತನಾಡಿದರು.

ಅಂಗವಿಕಲರು ಎಂದರೇ ಅಸಮರ್ಥರು ಎನ್ನುವ ತಪ್ಪು ಭ್ರಮೆ ಬೇಡ. ಅವರಲ್ಲಿಯೂ ವಿಶೇಷ ಸಾಮರ್ಥ್ಯ ಇರುತ್ತದೆ. ನಿರಂತರ ಶ್ರಮ ವಹಿಸುವ ಮೂಲಕ ಸಾಧನೆಯ ಹಾದಿ ಹಿಡಿಯಬೇಕು. ಅಂಗವಿಕಲರು ಎಲ್ಲರಂತೆ ಜೀವನದ ಪಯಣ ಮುನ್ನಡೆಸಬೇಕು ಎಂಬ ಉದ್ದೇಶದಿಂದ ಸುಮಾರು 12 ಮಂದಿ ತ್ರಿಚಕ್ರ ವಾಹನಗಳನ್ನು ನೀಡಲಾಗಿದೆ. ಅಂಗವಿಕಲರು ಸಾಮಾನ್ಯರಂತೆ ಜೀವನ ನಡೆಸಲು ಕಷ್ಟಕರವಾಗುತ್ತಿದೆಯಾದರೂ ಅವರಿಗೆ ಸ್ವಲ್ಪ ಅನುಕೂಲವಾಗಲು ಕೆಲಸಗಳನ್ನು ನಿರ್ವಹಿಸಲು ಇಂತಹ ದ್ವಿಚಕ್ರ ವಾಹನಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಟಿ.ನಾಗರಾಜು, ಉಪಾಧ್ಯಕ್ಷ ಸಿ.ಎಂ.ಗೌಡ ,ಎಸ್ಸಿ ಬ್ಲಾಕ್ ಅದ್ಯಕ್ಷ ಬಿನ್ನಮಂಗಲ ವೆಂಕಟೇಶ್, ಬಿಎಂಟಿಸಿ ಮಾಜಿ ನಿರ್ದೇಶಕ ಮಿಲ್ಟ್ರಿಮೂರ್ತಿ, ನಗರಸಭೆ ಉಪಾಧ್ಯಕ್ಷೆ ಸುಜಾತಮುನಿಯಪ್ಪ, ಸದಸ್ಯ ಸಿ.ಪ್ರದೀಪ್, ಆನಂದ್, ವಕೀಲ ಗಂಗರಾಜು, ವಿಜಯ್‌ಕುಮಾರ್, ಮುಖಂಡ ಹಸಿರುಹಳ್ಳಿಕುಮಾರ್, ವೀರಣ್ಣ, ರವಿಕುಮಾರ್, ಪೈಂಟ್‌ಮಂಜು, ಮಂಜುನಾಥಯ್ಯ, ಚಿಕ್ಕಣ್ಣ ನಗರತ್ನಮ್ಮ ಉಪಸ್ಥಿತರಿದ್ದರು.

ವಿಮಾನ ನಿಲ್ದಾಣ ಬೇಡ

ಸೋಲದೇವನಹಳ್ಳಿ ಬಳಿ ವಿಮಾನ ನಿಲ್ದಾಣ ವಿಚಾರವಾಗಿ ಸರ್ಕಾರದ ಹಂತದಲ್ಲಿ ಚರ್ಚೆ ನಡೆಸುತ್ತಿದ್ದು , ಈ ಕುರಿತು ಉಪಮುಖ್ಯಮಂತ್ರಿ ಸಭೆ ಕರೆಯಲಾಗಿತ್ತು. ಸೋಲದೇವನಹಳ್ಳಿ ಭಾಗದಲ್ಲಿ ಸಾಕಷ್ಟು ಮಂದಿ ರೈತರು ಜೀವನ ನಡೆಸುತ್ತಿದ್ದು, ಇಲ್ಲಿ ಯೋಜನೆ ಬೇಡ ಎಂದು ಸಭೆಯಲ್ಲಿ ಮನವಿ ಮಾಡಲಾಗಿದೆ. ಆದರೆ ವಿರೋಧ ಪಕ್ಷದವರು ಈ ಕುರಿತು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.

ರಾಜಕೀಯ ಹಸ್ತಕ್ಷೇಪ ಮಾಡಿಲ್ಲ

ಹೊನ್ನೇನಹಳ್ಳಿ ಪಿಡಿಒ ಭ್ರಷ್ಟಾಚಾರ ಹಾಗೂ ಕೆಲ ಹಣ ದುರುಪಯೋಗ ಹಿನ್ನೆಲೆ ಅಮಾನತುಪಡಿಸಲಾಗಿದೆ. ಅದರೆ ಬಿಜೆಪಿ, ಜೆಡಿಎಸ್ ಮುಖಂಡರು ಸರಿಯಾಗಿ ಮಾಹಿತಿ ತಿಳಿದುಕೊಳ್ಳದೇ ನನ್ನ ಮೇಲೆ ಅರೋಪ ಮಾಡುತ್ತಾರೆ. ಪಿಡಿಒ ವರ್ಗಾವಣೆ ಬಗ್ಗೆ ಕಾನೂನಾತ್ಮಕವಾಗಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ರಾಜಕೀಯವಾಗಿ ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಭ್ರಷ್ಟ ಅಧಿಕಾರಿಗಳನ್ನು ತಾಲೂಕಿನಿಂದ ವರ್ಗಾವಣೆ ಮಾಡಿಸುವ ಕಾರ್ಯ ಮಾಡಲಾಗಿದೆ. ಇದನ್ನು ಬಿಟ್ಟು ವಿರೋಧ ಪಕ್ಷದವರು ನನ್ನ ಮೇಲೆ ಅರೋಪ ಮಾಡುವುದು ಸರಿಯಲ್ಲ. ಮುಂದಿನ ಚುನಾವಣೆಯಲ್ಲಿ ಜನರು ತಕ್ಕಪಾಠ ಕಲಿಸುತ್ತಾರೆಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.

ಯೋಜನೆ ಸದ್ಬಳಕೆ ಆಗಲಿ

’ಅಂಗವಿಕಲರು ಸಮಾಜದ ಮುಖ್ಯವಾಹಿನಿಗೆ ಬಂದು ನೆಮ್ಮದಿಯ ಜೀವನ ನಡೆಸಬೇಕು. ಇದಕ್ಕಾಗಿ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವು ಫಲಾನುಭವಿಗಳಿಗೆ ತಲುಪಬೇಕು. ಅಂಗವಿಕಲರಿಗೆ ಸಿಗಬೇಕಾದ ಸೌಲಭ್ಯಗಳನ್ನು ಕಾಲ ಕಾಲಕ್ಕೆ ಅವರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಅಧಿಕಾರಿಗಳು ಮಾಡಬೇಕಿದೆ. ಸರ್ಕಾರದಿಂದ ನೀಡಿರುವ ತ್ರಿಚಕ್ರ ವಾಹನವನ್ನು ಪ್ರತಿಯೊಬ್ಬರು ಸರಿಯಾದರೀತಿ ಸದುಪಯೋಗ ಪಡಿಸಿಕೊಳ್ಳಬೇಕೆಂದು ನಗರಸಭೆ ಅಧ್ಯಕ್ಷೆ ಪೂರ್ಣಿಮಾ ಸುಗ್ಗರಾಜು ತಿಳಿಸಿದರು.