ಚಿಕ್ಕಬಳ್ಳಾಪುರ: ಕರ್ನಾಟಕದ ಮಾದರಿ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿರುವವರೇ ದೇಶದ ವಿವಿಧ ರಾಜ್ಯಗಳಲ್ಲಿ ಜಾರಿಗೆ ತಂದು ಅಧಿಕಾರ ನಡೆಸುತ್ತಿದ್ದಾರೆ. ಹಾಗೆಯೇ ಮುಂಬರುವ ದಿನಗಳಲ್ಲಿ ಉತ್ತರ ಪ್ರದೇಶದಲ್ಲೂ ಸಹ ಘೋಷಿಸಬಹುದು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಸೂರಜ್ ಎ.ಎನ್.ಹೆಗ್ಗಡೆ ವ್ಯಂಗ್ಯವಾಡಿದರು.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತು ಪ್ರಗತಿ ಪರಿಶೀಲನೆ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಜನರ ಹಿತದೃಷ್ಟಿಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರವು ಮಹತ್ವಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೇ ನೇರವಾಗಿ ಸವಲತ್ತುಗಳು ಸಿಗುತ್ತಿವೆ. ಇದಕ್ಕಾಗಿ 52 ಸಾವಿರ ಕೋಟಿ ರೂಗಳನ್ನು ಬಜೆಟ್ನಲ್ಲಿ ಮೀಸಲಿಡಲಾಗಿತ್ತು. ಇಲ್ಲಿಯವರೆಗೆ 36 ಸಾವಿರ ಕೋಟಿ ರೂ ರ್ಖಚಾಗಿದೆ. ಇದು ದೊಡ್ಡ ಸಾಧನೆಯಾಗಿದೆ ಎಂದರು.
ಮಧ್ಯಪ್ರದೇಶ, ಜಾರ್ಖಂಡ್, ಮಹಾರಾಷ್ಟ್ರ, ರಾಜಾಸ್ಥಾನ, ದೆಹಲಿ, ಒರಿಸ್ಸಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿವೆ. ಕರ್ನಾಟಕದೊಳಗೆ ಬೆಳೆದು, ರಾಜ್ಯದ ಹೊರಗೂ ವಿಸ್ತರಿಸಿವೆ. ಜನರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಯೋಜನೆಗಳ ಅನುಷ್ಠಾನದಲ್ಲಿ ಏನಾದರೂ ಸಣ್ಣ ಪುಟ್ಟ ತೊಂದರೆಗಳು, ದೋಷಗಳು ಮತ್ತು ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಸರ್ಕಾರದ ಗಮನಕ್ಕೆ ತಂದು ಸರಿಪಡಿಸಲಾಗುವುದು. ಗೃಹ ಲಕ್ಷ್ಮಿ ಹಣವು ನವೆಂಬರ್ ರ್ವರೆಗೆ ಬಿಡುಗಡೆಯಾಗಿದ್ದು ಬಾಕಿ ಹಣವು ತ್ವರಿತವಾಗಿ ಫಲಾನುಭವಿಗಳಿಗೆ ತಲುಪಲಿದೆ. ಇದರಲ್ಲಿ ಯಾವುದೇ ಅನುಮಾನ, ಗೊಂದಲ ಬೇಡ. ಅಪಪ್ರಚಾರಗಳಿಗೆ ಯಾರೊಬ್ಬರೂ ಕಿವಿಗೊಡಬಾರದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಯಲುವಳ್ಳಿ ಎನ್.ರಮೇಶ್, ಉಪಾಧ್ಯಕ್ಷರಾದ ರಾಮಕೃಷ್ಣಪ್ಪ, ಜಿ.ಸುಬ್ಬಾರೆಡ್ಡಿ, ಆದಿರೆಡ್ಡಿ, ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಜಿ.ಪಂ.ಸಿಇಒ ಪ್ರಕಾಶ್ ಜಿ.ಟಿ ನಿಟ್ಟಾಲಿ ಮತ್ತಿತರರು ಇದ್ದರು.
*ಎಲ್ಲರೂ ಅರ್ಹರಿದ್ದಾರೆಯೇ?
ಕೇಂದ್ರ ಸರ್ಕಾರವು ಸಹ ವಿವಿಧ ಸ್ಥಾನಗಳಿಗೆ ಹಲವರ ನಾಮ ನಿರ್ದೇಶನ ಮಾಡಿದೆ. ಇವರಲ್ಲಿ ಎಲ್ಲರೂ ಅರ್ಹರೇ? ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಸೂರಜ್ ಎ.ಎನ್.ಹೆಗ್ಗಡೆ ಪ್ರಶ್ನಿಸಿದರು.
ನಾಮ ನಿರ್ದೇಶನದ ವಿವಿಧ ಹುದ್ದೆಗಳಿಗೆ (ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸೇರಿದಂತೆ) ಕರ್ನಾಟಕ ಸರ್ಕಾರವು ಕ್ಯಾಬಿನೆಟ್ ದರ್ಜೆ ಸ್ಥಾನಮಾನ ನೀಡಿರುವುದನ್ನು ಪ್ರಶ್ನಿಸಿ, ನ್ಯಾಯಾಲಯದ ಮೆಟ್ಟಿಲೇರಿದವರ ನಡೆಯ ಬಗ್ಗೆ ಖಾರವಾಗಿ ಕಿಡಿಕಾರಿದರು.
ಕೇಂದ್ರ ಸರ್ಕಾರವು ಹಲವು ಹುದ್ದೆಗಳಿಗೆ ನಾಮ ನಿರ್ದೇಶನ ಮಾಡಿದೆ. ಇದರಂತೆ ಕರ್ನಾಟಕ ಸರ್ಕಾರವು ನಡೆದುಕೊಂಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ತೀರ್ಮಾನದ ಆದೇಶಗಳು ಸಾಮಾನ್ಯ ಎಂದರು.
ಕೇಂದ್ರ ನಡೆಯನ್ನು ಪ್ರಶ್ನಿಸಿದೇ ನಿರ್ದಿಷ್ಟ ವಿಷಯಗಳಲ್ಲಿ ಗೊಂದಲ ಮೂಡಿಸುವಂತಹ ಟೀಕಾಕಾರರ ಧೋರಣೆಗಳು ಜನರಿಗೆ ಅರ್ಥವಾಗುತ್ತದೆ ಎಂದರು.