ಮೈಸೂರು: ಎಲ್ಲ ವಿದ್ಯೆಗಳ ಉಗಮ ಸ್ಥಾನವಾಗಿ, ಎಲ್ಲ ಕಲೆಯ ನೆಲೆವೀಡಾಗಿ, ನೆಮ್ಮದಿಯ ತಾಣವಾಗಿ, ಲೋಕಗುರುವಾಗಿ ಉತ್ತುಂಗದಲ್ಲಿ ಭಾರತ ವಿರಾಜಿಸಿದೆ…!
ಇಂತಹ ಅನುಪಮವಾದ ಭಾರತದ ವಿದ್ಯೆ, ಕಲೆ, ಸಂಸ್ಕೃತಿ, ಪರಂಪರೆಗಳನ್ನು ಉಳಿಸಿ-ಬೆಳೆಸುವ ಉದ್ದೇಶದಿಂದ ‘ಭಾರತೀ ಯೋಗಧಾಮ’ ಕಾರ್ಯಪ್ರವೃತ್ತವಾಗಿದೆ. ಇಡೀ ವಿಶ್ವಕ್ಕೆ ಯೋಗ, ಆಯುರ್ವೇದ, ಕಲೆ ಮತ್ತು ಸಂಸ್ಕೃತಿಯನ್ನು ಪಸರಿಸಿದ ಕೀರ್ತಿ ಮೈಸೂರಿಗೆ ಸಲ್ಲುತ್ತದೆ. ಮೈಸೂರಿಗೆ ಇಂತಹ ಕೀರ್ತಿ ಸಲ್ಲುವಲ್ಲಿ ‘ಭಾರತೀ ಯೋಗಧಾಮ’ದ ಪಾಲೂ ಹೆಚ್ಚಾಗಿದೆ.
ಮೈಸೂರಿನ ಉತ್ತನಹಳ್ಳಿ ಬಳಿ ಯೋಗ, ಆಯುರ್ವೇದ, ಜ್ಯೋತಿಷದೊಂದಿಗೆ ಭಾರತೀಯ ವಿದ್ಯೆ, ಕಲೆ ಹಾಗೂ ಸಂಸ್ಕೃತಿ ಉಳಿವಿಗೆ ಕೆಲಸ ಮಾಡುತ್ತಿರುವ ಭಾರತೀ ಯೋಗಧಾಮಕ್ಕೀಗ ಅರ್ಧ ಮಂಡಲೋತ್ಸವದ ಸಂಭ್ರಮ (25 ವರ್ಷ).
ಯೋಗ-ಆಯುರ್ವೇದ-ಜ್ಯೋತಿಷ ಮೊದಲಾದ ಭಾರತೀಯ ವಿದ್ಯೆಗಳು ನೆಮ್ಮದಿಯ ಬುನಾದಿಗಳು. ಅವುಗಳಲ್ಲಡಗಿದ ವಿಜ್ಞಾನ ಕುರಿತ ಅಧ್ಯಯನ, ಅಧ್ಯಾಪನ ಹಾಗೂ ಸಂಶೋಧನೆ ಸಂಸ್ಥೆಯ ಪ್ರಧಾನ ಕಾರ್ಯವಾಗಿದೆ. ಸಂಸ್ಕೃತಿಯ ಸಂರಕ್ಷಣೆ ಈ ಸಂಸ್ಥೆಯ ಪರಮ ಧ್ಯೇಯವಾಗಿದೆ. ಸಂಸ್ಥೆ ಹಮ್ಮಿಕೊಂಡ ವಿಶಿಷ್ಟ ಯೋಜನೆಗಳ ಮೂಲಕ ಈ ಮಹಾಧ್ಯೇಯ ಸಾಕಾರಗೊಳ್ಳುತ್ತಿದೆ. 15 ಎಕರೆ ಜಾಗದಲ್ಲಿ ನಿತ್ಯ ಯೋಗ ಕಲಿಸಲಾಗುತ್ತಿದೆ, ಆಯುರ್ವೇದ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ ಮತ್ತು ಜ್ಯೋತಿಷಕ್ಕೆ ಸಂಬಂಧಿಸಿದ ಸಂಶೋಧನೆ ನಡೆಸಲಾಗುತ್ತಿದೆ.
ಡಾ.ಕೆ.ಎಲ್. ಶಂಕರನಾರಾಯಣ ಜೋಯ್ಸ ಅವರ ಅಪಾರ ಪರಿಶ್ರಮದ ಫಲವಾಗಿ 1999ರಲ್ಲಿ ಸಂಸ್ಥೆ ಉದಯಿಸಿದೆ. ಈ ಮಹಾಕಾರ್ಯಕ್ಕೆ ಮಹಾ ಮಹೋಪಾಧ್ಯಾಯ ಎನ್.ಎಸ್. ರಾಮಭದ್ರಾಚಾರ್ಯರು ಕೂಡ ಬೆನ್ನೆಲುಬಾಗಿ ನಿಂತಿದ್ದರು.
ಗ್ರಹನಕ್ಷತ್ರವೇ ಮೊದಲಾದ ಆಕಾಶಕಾಯಗಳ ಪರಿವೀಕ್ಷಣೆಯೊಂದಿಗೆ ಕಾಲದ ಬಗ್ಗೆ ಸಮಗ್ರ ಜ್ಞಾನವನ್ನು ಸಾಧಿಸಲು ಮೂಲ ಸಾಧನ - ಭಾರತೀಯರ ವೇದ ಶಾಲೆ (ಜಂತರ್ ಮಂತರ್). ದಕ್ಷಿಣ ಭಾರತದಲ್ಲೇ ಮೊದಲನೆಯದಾಗಿ ಈ ರಚನೆಗಳು ಸಂಸ್ಥೆಯಲ್ಲಿ ನಿರ್ಮಾಣವಾಗುತ್ತಿವೆ. ಭಾರತೀಯ ಗೋತಳಿಗಳು ಪ್ರತಿಯೊಬ್ಬ ಭಾರತೀಯನಿಗೂ ಅತ್ಯಂತ ಪೂಜ್ಯವೂ, ಪ್ರಯೋಜಕವೂ ಆದದ್ದಾಗಿವೆ. ಅಂತಹ ಭಾರತೀಯ ಗೋತಳಿಗಳ ರಕ್ಷಣೆಯೂ ಈ ಸಂಸ್ಥೆಯ ಇನ್ನೊಂದು ಯೋಜನೆಯಾಗಿದೆ.
ಅಂತೆಯೆ, ಚಿಕಿತ್ಸೆ, ಸಂಶೋಧನೆ ಮತ್ತು ಹಸಿರನ್ನು ಉಳಿಸುವ ಉದ್ದೇಶಗಳೊಂದಿಗೆ ಅಪೂರ್ವವಾದ ಸಾವಿರಾರು ವೃಕ್ಷ-ವನಸ್ಪತಿ ಮತ್ತು ಹಲವು ವಿಶಿಷ್ಟ ವನಗಳನ್ನು ಬೆಳೆಸುವ ಯೋಜನೆಯನ್ನು ಸಂಸ್ಥೆ ಹೊಂದಿದೆ. ಭಾರತೀಯ ಸಂಸ್ಕೃತಿ, ಸತ್ಸಂಪ್ರದಾಯಗಳ ರಕ್ಷಣೆಗೆ, ಶಾಸ್ತ್ರ, ವಿದ್ಯೆ, ಕಲೆಗಳ ಬಗ್ಗೆ ಸಮಾಜದ ಎಲ್ಲ ವರ್ಗದ ಜನರಿಗೆ ಪಾಠ ಪ್ರವಚನಗಳನ್ನು ಮಾಡುವುದರ ಮೂಲಕ ನೆಮ್ಮದಿಯ ಜೀವನಕ್ಕೆ ದಿಗ್ದರ್ಶನ ನೀಡಲು ಅನೇಕ ಶಿಕ್ಷಣ ಪ್ರಧಾನವಾದ ಯೋಜನೆಗಳನ್ನೂ ಸಂಸ್ಥೆ ಹೊಂದಿದೆ. ಗೋಶಾಲೆ ಮೂಲಕ ಗೋವುಗಳ ಸೇವೆಯೂ ನಡೆಯುತ್ತಿದೆ.
ಅತಿಶಯವಾದ ನೆಮ್ಮದಿಯು ಮಾನವ ಜೀವನದ ಪರಮಲಕ್ಷ್ಯವಷ್ಟೆ. ಅತ್ತ ಕರೆದೊಯ್ಯುವ ಸಾಧನಗಳೇ ಋಷಿಮೂಲವಾದ ವಿದ್ಯೆಗಳು. ಅಂತಹ ಅಪೂರ್ವ ವಿದ್ಯೆಗಳಲ್ಲಿ ನೇರವಾಗಿ ಪೂರ್ಣವಾದ (ದೈಹಿಕ-ಮಾನಸಿಕ) ಆರೋಗ್ಯದ ಸೂತ್ರವನ್ನು ಸ್ಥಾಪಿಸಲು ಬಂದ ವಿದ್ಯೆ ಆಯುರ್ವೇದ. ಅತಿಶಯವಾದ ನೆಮ್ಮದಿಯ ತಾಣಕ್ಕೆ ದಿಗ್ದರ್ಶಕವಾದದ್ದು ಯೋಗ. ಸಮಗ್ರ ಜೀವನದರ್ಶನಕ್ಕೆ ಕಣ್ಣಿನ ಸ್ಥಾನದ ವಿದ್ಯೆ ಜ್ಯೋತಿಷ. ಈ ಮೂರೂ ವಿದ್ಯೆಗಳ ಸಮುಚಿತವಾದ ಬಳಕೆಯೊಂದಿಗೆ ಸಮಾಜದ ಹಿತವನ್ನು ಸಾಧಿಸಲು ಮಾದರಿಯಾಗಿರುವ ಶಿಕ್ಷಣ ವ್ಯವಸ್ಥೆ - ತ್ರಯೀಯೋಗ!
ಒಂದು ವರ್ಷದಲ್ಲಿ 96 ತರಗತಿಗಳ ಮೂಲಕ ಯೋಗ, ಆಯುರ್ವೇದ, ಜ್ಯೋತಿಷ - ಈ ಮೂರು ವಿದ್ಯೆಗಳ ಮೂಲಭೂತ ಪರಿಚಯವನ್ನೂ ನೀಡಿ, ಆರೋಗ್ಯಕ್ಕೆ ಬೇಕಾದ ಆಸನ ಪ್ರಾಣಾಯಾಮಗಳನ್ನು ಕಲಿಸುವ ಶಿಕ್ಷಣ ಯೋಜನೆ ಇದಾಗಿದೆ. ಪೂರ್ಣವಾಗಿ ಭಾಗವಹಿಸಿದವರಿಗೆ ವರ್ಷಾಂತ್ಯದಲ್ಲಿ ಪ್ರಮಾಣಪತ್ರವನ್ನೂ ನೀಡಲಾಗುತ್ತಿದೆ. ಅಂತೆಯೆ, ರೋಗದಿಂದ ಬಳಲುತ್ತಿರುವವರಿಗೆ ಸಂಸ್ಥೆಯ ನುರಿತ ತಜ್ಞರುಗಳಿಂದ ಜ್ಯೋತಿಷ ಮಾರ್ಗದರ್ಶನವನ್ನೂ ಕೊಟ್ಟು, ಆಯುರ್ವೇದ ಸೂಚಿಸುವ ಪಥ್ಯ, ದಿನಚರ್ಯಗಳ ಬಗ್ಗೆಯೂ ಸಲಹೆ- ಸೂಚನೆಗಳನ್ನು ನೀಡಿ ಯೋಗಾಸನ, ಪ್ರಾಣಾಯಾಮಗಳ ಮೂಲಕ ಉತ್ತಮವಾದ ಆರೋಗ್ಯ ಸಿದ್ಧಿಗೆ ಮಾರ್ಗದರ್ಶನವನ್ನು ನೀಡುತ್ತಿದೆ.
ಭಾರತೀ ಯೋಗಧಾಮದಲ್ಲಿ ವಿದ್ಯಾನಂದಿನಿ ಗುರುಕುಲಮ್ ಶಾಲೆ ಮೂಲಕ ಶಿಕ್ಷಣವನ್ನು ನೀಡಲಾಗುತ್ತಿದೆ. 1ರಿಂದ 8 ನೇ ತರಗತಿವರೆಗಿನ 35 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಸಮಾಜದಲ್ಲಿನ ಬದುಕಿಗೆ ಅತ್ಯಗತ್ಯವೆನಿಸಿದ ಆಧುನಿಕ ವಿದ್ಯಾಭ್ಯಾಸವನ್ನೂ ಉತ್ತಮ ಗುಣಮಟ್ಟದಲ್ಲಿ ನೀಡುತ್ತಾ, ಅತ್ಯುತ್ತಮವಾದ ನೈತಿಕ ಮೌಲ್ಯಗಳಿಂದ ತುಂಬಿ ಸಮೃದ್ಧವಾಗಿರುವ ಪ್ರಾಚೀನ ಶಿಕ್ಷಣವನ್ನೂ ನೀಡುವ ವ್ಯವಸ್ಥೆ ಇಂದಿನ ಕಾಲಘಟ್ಟದ ಮೂಲಭೂತ ಅಗತ್ಯ. ಅಂತಹ ವಿಶಿಷ್ಟವಾದ ಆಧುನಿಕ ಹಾಗೂ ಪ್ರಾಚೀನ ಶಿಕ್ಷಣಗಳು ಬೆಸೆದು ಇಲ್ಲಿ ಶಿಕ್ಷಣ ನೀಡಲಾಗುತ್ತಿದೆ ಎಂಬುದು ವಿಶೇಷ.
ಕೇಂದ್ರ ಸರ್ಕಾರದ ಎನ್‌ಐಒಎಸ್‌ನ ಮಾನ್ಯತೆ ಪಡೆದು ಕಳೆದೆರಡು ವರ್ಷಗಳಿಂದ ಸಕ್ರಿಯವಾಗಿರುವ, ಗುರುಕುಲ ಮಾದರಿಯ ಈ ಶಾಲೆ ಆಧುನಿಕ ವಿದ್ಯಾಭ್ಯಾಸವನ್ನು ಆಂಗ್ಲ ಮಾಧ್ಯಮದಲ್ಲಿ ನೀಡುವುದರ ಜತೆಗೆ, ಸಂಸ್ಕೃತ, ಯೋಗ, ಭಗವದ್ಗೀತೆ, ಸ್ತೋತ್ರ, ರಾಮಾಯಣ, ಮಹಾಭಾರತ ಮೊದಲಾದ ಪ್ರಾಚೀನ ಶಿಕ್ಷಣವನ್ನು ಸಂಸ್ಕೃತ ಹಾಗೂ ನಾಡಭಾಷೆಯಾದ ಕನ್ನಡದಲ್ಲಿ ನಿರ್ವಹಿಸುತ್ತಿದೆ.
ಇದೀಗ ನಮ್ಮ ಸಂಸ್ಥೆ 24 ಸಂವತ್ಸರಗಳು ತುಂಬಿದ ಸಂಭ್ರಮದಲ್ಲಿದೆ. ‘ಅರ್ಧಮಂಡಲೋತ್ಸವ’ ಎಂಬ ನಾಮಾಂಕಿತದಲ್ಲಿ ವರ್ಷಪೂರ್ಣ ಅನೇಕ ವಿದ್ಯಾಮುಖವಾದ ಕಾರ್ಯಗಳನ್ನು ಹಮ್ಮಿಕೊಂಡು ಸಾಗುತ್ತಿದೆ. ಈ ವಿಶೇಷ ಯಾತ್ರೆಯ ಮತ್ತೊಂದು ಹೆಜ್ಜೆಯಾಗಿ, ರಾಮ ಜನ್ಮಭೂಮಿಯಲ್ಲಿ ಲೋಕಾರ್ಪಣೆಯಾಗುತ್ತಿರುವ ಶ್ರೀರಾಮ ಮಂದಿರದ ಸಂಭ್ರಮದ ಅಂಗವಾಗಿ ಸಂಸ್ಕೃತಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರ ಉಪನ್ಯಾಸ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ. ಜ. 22ರಿಂದ ಒಂದು ವರ್ಷ ಯೋಗ ಕೋರ್ಸ್ ಆರಂಭಿಸುತ್ತಿದ್ದೇವೆ.ಡಾ.ಗಣಪತಿ ಭಟ್ಭಾರತೀ ಯೋಗಧಾಮದ ಟ್ರಸ್ಟಿ