ವಿಜಯವಾಣಿ ಸುದ್ದಿಜಾಲ ಪುತ್ತೂರು (ದ.ಕ.)
ವಿಶ್ವ ಆರೋಗ್ಯ ಸಂಸ್ಥೆಯ ಸಭೆಗೆ ತೆರಳುವ ಭಾರತದ ಪ್ರತಿನಿಧಿಗಳಿಗೆ ಅಡಕೆಯ ಔಷಧೀಯ ಮೌಲ್ಯಗಳ ಮಾಹಿತಿ ನೀಡುವ ಜತೆಗೆ, ಅಡಕೆಯ ಅಧ್ಯಯನದ ಮಾಹಿತಿ ಹಾಗೂ ಕೃಷಿಕರ ಬದುಕಿನ ಮಾಹಿತಿ ನೀಡಲು ವ್ಯವಸ್ಥೆಯಾಗಬೇಕು ಎಂದು ಅಡಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ (ಎಆರ್‌ಡಿಎಫ್) ಸಭೆಯಲ್ಲಿ ನಿರ್ಧರಿಸಲಾಗಿದೆ.
ಪ್ರತಿಷ್ಠಾನದ ಅಧ್ಯಕ್ಷ ಡಾ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆಯಲ್ಲಿ ಮಂಗಳವಾರ ಧರ್ಮಸ್ಥಳದಲ್ಲಿ ಸಭೆ ನಡೆಯಿತು.
ಅಡಕೆ ಹಾನಿಕಾರಕ ಅಲ್ಲ ಎಂಬ ಅಂಶ ಈಗಾಗಲೇ ಅಧ್ಯಯನದಿಂದ ಹೊರಬಂದಿದ್ದು, ಎಆರ್‌ಡಿಎ್ ಹಾಗೂ ಜೆಡ್ಡು ಆಯುರ್ವೇದ ಸಂಸ್ಥೆ ಈ ಬಗ್ಗೆ ಮಾಡಿರುವ ಅಧ್ಯಯನ ಅಂತರಾಷ್ಟ್ರೀಯ ಜರ್ನಲ್‌ನಲ್ಲೂ ಪ್ರಕಟವಾಗಿದೆ ಎಂಬ ಅಂಶವನ್ನು ಸಭೆಯ ಗಮನಕ್ಕೆ ತರಲಾಯಿತು.
ವಿದೇಶಿ ಅಡಕೆ ಆಮದು ತಡೆಗೆ, ಅಡಕೆ ಗುಣಮಟ್ಟದ ಮಾಹಿತಿ ಅಗತ್ಯ. ಈಗಾಗಲೇ 63ಕ್ಕೂ ಹೆಚ್ಚು ವಿದೇಶಿ ಅಡಕೆಯ ಸ್ಯಾಂಪಲ್ ಗಳನ್ನು ಎಆರ್‌ಡಿಎ್ ಪರಿಶೀಲಿಸಿದೆ. ಈ ಬಗ್ಗೆ ಸುಸಜ್ಜಿತವಾದ ಪ್ರಯೋಗಾಲಯ ಸ್ಥಾಪನೆ ಅಗತ್ಯವಿದೆ. ಅಡಕೆಯ ಇತರ ಬಳಕೆಯಾದ ಶಾಯಿ, ಅಡಕೆಯ ಬಣ್ಣದ ಬಗ್ಗೆ ಇನ್ನಷ್ಟು ಅಧ್ಯಯನ ಹಾಗೂ ಸಂಸ್ಥೆಗಳ ಮೂಲಕ ತಯಾರಿಗೆ ಸಲಹೆ ನೀಡಲಾಯಿತು.
ಅಡಕೆ ಹಳದಿರೋಗ ಪೀಡಿತ ಪ್ರದೇಶದ ರೈತರಿಗೆ ನೆರವಾಗಲು ಸರ್ಕಾರದಿಂದ ಕ್ರಮವಾಗಬೇಕು. ಈ ಬಗ್ಗೆ ಒತ್ತಾಯ ಅಗತ್ಯವಿದೆ. ಆ ಪ್ರದೇಶದಲ್ಲಿ ಪರ್ಯಾಯ ಬೆಳೆಗೆ ಪ್ರೋತ್ಸಾಹ ನೀಡಲು ಯೋಜನೆಗೆ ಸಲಹೆ ನೀಡಲಾಯಿತು. ವಿಶೇಷವಾಗಿ ಸುಳ್ಯ, ಶೃಂಗೇರಿ ಹಾಗೂ ಕೊಪ್ಪ ತಾಲೂಕಿಗೆ ಆದ್ಯತೆ ನೀಡಬೇಕಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಅಡಕೆ ಕೊಳೆರೋಗದಿಂದ ಕೃಷಿಕರು ಸಂಕಷ್ಟ ಅನುಭವಿಸಿರುವ ಬಗ್ಗೆ ಚರ್ಚೆ ನಡೆಯಿತು. ಶೇ.70ರಷ್ಟು ನಷ್ಟವಾಗಿರುವ ಬಗ್ಗೆ ಅಂದಾಜಿಸಲಾಗಿದ್ದು, ಸರ್ಕಾರದ ಗಮನಕ್ಕೆ ತಂದು ಪರಿಹಾರ ಕ್ರಮಗಳ ಬಗ್ಗೆಯೂ ಒತ್ತಾಯಿಸಲಾಯಿತು. ಅಡಕೆಯ ವಿವಿಧ ಔಷಧೀಯ ಗುಣ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸಲು ನಿರ್ಧರಿಸಲಾಗಿದೆ.
ಸಭೆಯಲ್ಲಿ ಅಡಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಟ್ರಸ್ಟಿಗಳಾದ ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಅಡಕೆ ಮಹಾಮಂಡಲ ಅಧ್ಯಕ್ಷ ಆರಗ ಜ್ಞಾನೇಂದ್ರ, ಕ್ಯಾಂಪ್ಕೊ ಆಡಳಿತ ನಿರ್ದೇಶಕ ಬಿ.ವಿ.ಸತ್ಯನಾರಾಯಣ, ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ತುಮ್ಕೋಸ್ ಅಧ್ಯಕ್ಷ ಎಚ್.ಎಸ್.ಶಿವಕುಮಾರ್, ಅಡಕೆ ಕೃಷಿ ಸಂಶೋಧಕ ಬದನಾಜೆ ಶಂಕರ ಭಟ್, ಅಖಿಲ ಭಾರತ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ, ಅಡಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಸ್ ಕೇಶವ ಭಟ್ ಉಪಸ್ಥಿತರಿದ್ದರು.