ನ್ಯಾಮತಿ: ತಾಲೂಕಿನ ಮಾದಾಪುರ ಗ್ರಾಮದ ಕೆರೆಯೊಂದರಲ್ಲಿ ಮಾರ್ಚ್ ತಿಂಗಳಿನಲ್ಲಿ ಹೂಳೆತ್ತುವಾಗ ಪತ್ತೆಯಾದ ಶಿಲಾ ಶಾಸನವನ್ನು ಬಾದಾಮಿ ಚಾಲುಕ್ಯರ ಶಾಸನವೆಂದು ವಿಜಯನಗರ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ, ಕಮಲಾಪುರ ನಿರ್ದೇಶಕ ಡಾ.ಆರ್. ಶೇಜೇಶ್ವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಾಸನವು 5 ಅಡಿ ಉದ್ದವಿದ್ದು ಹಳೆಗನ್ನಡದ 17 ಸಾಲುಗಳ ಬರಹವಿದೆ. ಕ್ರಿಶ 7ನೇ ಶತಮಾನದ ಬಾದಾಮಿ ಚಾಲುಕ್ಯರ ಒಂದನೇ ವಿಕ್ರಮಾದಿತ್ಯನ ಆಳ್ವಿಕೆಯ ಸಮಯದಲ್ಲಿ ಅಧಿಕಾರಿ ಸಿಂಘವೆಣ್ಣ ಬಳ್ಳಾವಿ ನಾಡನ್ನು ಆಳುತ್ತಿದ್ದಾಗ ಪ್ರಜೆಗಳಿಗಾಗಿ ಊರ ಮೇಲಿನ ಕೆಲವು ತೆರಿಗೆಗಳನ್ನು ಮನ್ನಾ ಮಾಡಿರುವುದನ್ನು, ಕೆರೆಯನ್ನು ನಿರ್ವಿುಸಿದ ಜನರಿಗೆ ಭೂ ಮಿಯನ್ನು ದಾನ ನೀಡಿರುವುದನ್ನು ಹಾಗೂ ಭೂಮಿಯು ಬಳ್ಳಾವಿ ಎಪ್ಪತ್ತರ ಒಕ್ಕಲುಗಳಿಗೆ ಸಲ್ಲುತ್ತದೆ ಎಂದು ಶಾಸನದಲ್ಲಿ ಉಲ್ಲೇಖವಿದೆ ಎಂದರು.
ಶಾಸನ ಶೋಧನೆಯಿಂದಾಗಿ ಬಳ್ಳಾವಿಯಲ್ಲಿ 70 ಗ್ರಾಮಗಳಿದ್ದು ಆಡಳಿತ ವಿಭಾಗದ ಪ್ರಾಚೀನತೆ ಮತ್ತು ಶಾಸನವು 1344 ವರ್ಷಗಳ ಪುರಾತನವಾಗಿದ್ದು ಎಂದು ತಿಳಿದು ಬಂದಿದೆ. ಜತೆಗೆ ಶಾಸನದ ಮುಂಭಾಗ ಹಾಗೂ ಹಿಂಭಾಗದಲ್ಲಿ ಕ್ರಿಶ 17ನೇ ಶತಮಾನದ ಅಪೂರ್ಣ ಉಬ್ಬು ಶಿಲ್ಪವಿದೆ ಎಂದು ಮಾಹಿತಿ ನೀಡಿದ್ದಾರೆ.
ಶಾಸನ ಪರಿಶೀಲನೆ ಕಾರ್ಯದಲ್ಲಿ ಸಹಕರಿಸಿದ ಪೋ›. ಶ್ರೀನಿವಾಸ್ ಪಾಡಿಗರ್, ಡಾ. ರವಿಕುಮಾರ್ ನವಲಗುಂದ, ಮಂಜಪ್ಪ ಚುರ್ಚಗುಂಡಿ, ಮಾದಾಪುರ ಗ್ರಾಮ ಲೆಕ್ಕಿಗ ವಿಶ್ವನಾಥ್, ಗ್ರಾಮಸ್ಥರಾದ ಭುಜಂಗ, ವೀರೇಶ್, ರಮೇಶ್ ಹಿರೇಜಂಬೂರು ಅವರಿಗೆ ಅಭಿನಂದಿಸಿದ್ದಾರೆ.