ಮಂಗಳುರು: ಬಹುನಿರೀಕ್ಷೆಯ ಒಂಭತ್ತನೇ ವರ್ಷದ ಆರ್ಚ್ ಫಾರ್ಮಾ ಜಿಪಿಎಲ್ ಉತ್ಸವ್ - 2025 ಈ ಬಾರಿ ಫೆ.14, 15 ಹಾಗೂ 16 ರಂದು ನಡೆಯಲಿದೆ. ಬೆಳಿಗ್ಗೆಯಿಂದ ರಾತ್ರಿಯ ತನಕ ಮೂರು ದಿನ ನಡೆಯುವ ಈ ಸಂಭ್ರಮಕ್ಕಾಗಿ ಸಹ್ಯಾದ್ರಿ ಕಾಲೇಜಿನ ಹಚ್ಚಹಸುರಿನ ಕ್ರೀಡಾಂಗಣ ಸಜ್ಜಾಗಿದೆ.
ಮಂಗಳೂರು ನಗರದ ಹೊರವಲಯದಲ್ಲಿ ಮೈದುಂಬಿ ಹರಿಯುತ್ತಿರುವ ನೇತ್ರಾವತಿ ನದಿ ತೀರದಲ್ಲಿ ರಂಗುರಂಗಾಗಿ ಜಿಪಿಎಲ್ ಉತ್ಸವ ನಡೆಯಲಿದೆ. ಕರ್ನಾಟಕ, ಮಹಾರಾಷ್ಟ್ರ, ಕೇರಳ, ತೆಲಂಗಾಣ ಸೇರಿದಂತೆ ಕರಾವಳಿ ಕರ್ನಾಟಕವನ್ನು ಒಳಗೊಂಡು ಒಟ್ಟು 16 ತಂಡಗಳು ಬಿರುಸಿನ ತಯಾರಿ ನಡೆಸಿದ್ದು, ಪ್ರತಿಷ್ಟಿತ ಕಪ್‌ಗಾಗಿ ಸೆಣಸಾಡಲಿವೆ.
ಮೂರು ದಿನ ಹೊನಲು ಬೆಳಕಿನಲ್ಲಿ ನಡೆಯುವ ಪಂದ್ಯಾಟ ಕಾರ್ಯಕ್ರಮದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಕ್ರೀಡಾಪ್ರೇಮಿಗಳಿಗೆ ಸಮೃದ್ಧವಾಗಿ ಉದರದ ಖುಷಿಯನ್ನು ಕೂಡ ತಣಿಸಲು ಹಲವು ಬಗೆಯ ಖಾದ್ಯಗಳನ್ನು ಉಣಬಡಿಸಲು ವಿಶಾಲವಾದ ಫುಡ್ ಕೋರ್ಟ್ ತಯಾರಾಗಿದೆ. ಮುಂಬೈಯ ವಡಾಪಾವ್ ನಿಂದ ಹಿಡಿದು ಪನ್ನೀರ್ ಸ್ಟಿಕ್ ಮಂಚೂರಿ, ಮಂಚೂರಿಯನ್ ಐಟಂ, ವೆಜ್ ನ್ಯೂಡಲ್ಸ್, ವೆಜ್ ಬಿರಿಯಾನಿ, ಡೋಕ್ಲಾ ಪೊಟೆಟೋ ಟ್ವೀಸ್ಟರ್, ಕಬ್ಬಿನರಸ, ಕಾಟನ್ ಕ್ಯಾಂಡಿ, ವಿವಿಧ ಬಗೆಯ ಸಿಹಿತಿಂಡಿಗಳು, ವಿವಿಧ ನಮೂನೆಯ ದೋಸೆಗಳು, ವಿವಿಧ ವೆರೈಟಿ ಐಸ್ ಕ್ರೀಂ, ಚರುಂಬುರಿ, ಹಣ್ಣು ಹಂಪಲುಗಳ ಸಹಿತ ಮೊಕ್ ಟೇಲ್ ರುಚಿಯನ್ನು ಕೂಡ ಮೂರು ದಿನವೂ ಸವಿಯಬಹುದಾಗಿದೆ.
ಹಿರಿಯರಿಗೆ ಮಿಸ್ಟರ್ ಅಂಡ್ ಮಿಸಸ್ , ಮಕ್ಕಳಿಗಾಗಿ ಪ್ರಿನ್ಸ್ ಅಂಡ್ ಪ್ರಿನ್ಸ್ ಸ್, ಫ್ಯಾನ್ಸಿ ಡ್ರೆಸ್, ಪ್ಲಾರಲ್ ಗಾರ್ಡನ್ ಮೇಕಿಂಗ್, ಯುವ ಸಾಧಕ ಪ್ರಶಸ್ತಿ, ಪ್ರತಿಭಾ ಪ್ರದರ್ಶನ, ಸ್ಯಾರಿ ಶೃಂಗಾರ, ರಂಗೋಲಿ, ಡ್ರಾಯಿಂಗ್ ಸಹಿತ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶಾಪಿಂಗ್ ಮೇಳಾ, ಜಲಕ್ರೀಡೆ, ಮಕ್ಕಳ ಆಟದ ಲೋಕ, ಜಿಎಸ್ ಬಿ ಸಮುದಾಯದ ಕಲೆ, ಸಂಸ್ಕೃತಿ ಪ್ರದರ್ಶನ ನಡೆಯಲಿದೆ.
------------------
ಪ್ರತಿ ವರ್ಷದಂತೆ ಈ ವರ್ಷವೂ ಹೊಸ ಕಲ್ಪನೆ
ಈ ಬಾರಿ ವಿಶೇಷವಾಗಿ 150 ಡ್ರೋನ್ ಗಳು ಏಕಕಾಲದಲ್ಲಿ ಇರುಳಿನ ಆಗಸದಲ್ಲಿ ವರ್ಣ ವೈವಿಧ್ಯಗಳ ಚಿತ್ತಾರವನ್ನು ಬಿಡಿಸಲಿವೆ. ಮಂಗಳೂರಿನಲ್ಲಿ ಪ್ರಪ್ರಥಮ ಬಾರಿ ಇಂತಹ ವಿಶಿಷ್ಟ ಪ್ರಯೋಗವನ್ನು ಜಿಪಿಎಲ್ ಉತ್ಸವದಲ್ಲಿ ಮಾತ್ರ ಕಾಣಬಹುದಾಗಿದೆ. ಇದಕ್ಕಾಗಿ ಸಂಪೂರ್ಣ ತಯಾರಿ ನಡೆಸಲಾಗಿದ್ದು, ಫೆ.15 ರ ರಾತ್ರಿ ಈ ಅದ್ಭುತ ಅನಾವರಣಗೊಳ್ಳಲಿದೆ. ಕಿಡ್ಸ್ ಝೋನ್ ಗಳಲ್ಲಿಯೂ ಮಕ್ಕಳಿಗಾಗಿ ಹೊಸ ಆಟದ ಸಲಕರಣೆಗಳ ವಿನ್ಯಾಸ ರಚಿಸಲಾಗಿದ್ದು, ಅವರಿಗೂ ಹಬ್ಬದ ಅನುಭವ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ. ಶನಿವಾರ ಸಂಜೆ ಉದ್ಘಾಟನಾ ಕಾರ್ಯಕ್ರಮವಿದ್ದು, ನಾಡಿನ ಖ್ಯಾತನಾಮರು ಭಾಗವಹಿಸಲಿದ್ದಾರೆ. ಭಾನುವಾರ ರಾತ್ರಿ ಸಮಾರೋಪ ಸಮಾರಂಭ ನಡೆಯಲಿದ್ದು, ಝಾಂಬಾ ಡ್ಯಾನ್ಸ್ ವಿಶೇಷ ಆಕರ್ಷಣೆಯಾಗಿದೆ. ಮ್ಯಾನ್ ಆಫ್ ದಿ ಸಿರೀಸ್ ಕ್ರೀಡಾಪಟುವಿಗೆ ಆಕರ್ಷಕ ಬೈಕ್ ನೀಡಿ ಗೌರವಿಸಲಾಗುವುದು. ಈ ಎಲ್ಲಾ ಕಾರ್ಯಕ್ರಮಗಳಿಗೆ ಜಿಎಸ್ ಬಿ ಬಾಂಧವರಿಗೆ ಉಚಿತ ಪ್ರವೇಶವಿದೆ ಎಂದು ಆಯೋಜಕರು ತಿಳಿಸಿದ್ದಾರೆ.