ಜಿಲ್ಲೆ

ಭಯ ಹೆಚ್ಚುತ್ತಿರುವುದರಿಂದ ಲಸಿಕೆಗೆ ಬೇಡಿಕೆ, ಸಿಟಿ ಸ್ಕ್ಯಾನಿಂಗ್‌ಗೆ ಹೆಚ್ಚು ಹಣ ಪಡೆದರೆ ಕ್ರಮ

Kolar

ಕೋಲಾರ: ಕರೊನಾ ಲಸಿಕೆ ಹಾಕಿಸಿಕೊಳ್ಳುವಂತೆ ಸರ್ಕಾರ ಗೋಗರೆದರೂ ಹಿಂದೇಟು ಹಾಕಿದ್ದ ಜನರು ಭಯ ಹೆಚ್ಚಾದ ಮೇಲೆ ಲಸಿಕೆ ಹಾಕಿಸಿಕೊಳ್ಳಲು ಕಾತರರಾಗಿರುವುದರಿಂದ ಬೇಡಿಕೆ ಹೆಚ್ಚಾಗಿದೆ, ಹಂತ-ಹಂತವಾಗಿ ಲಸಿಕೆ ಹಾಕಲಾಗುವುದು ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ಸ್ಪಷ್ಟಪಡಿಸಿದರು.

ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲನೆಗಾಗಿ ಜಿಲ್ಲಾ ಪ್ರವಾಸ ಕೈಗೊಂಡಿರುವ ಅವರು ಬುಧವಾರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಲಸಿಕೆಗಾಗಿ ಬೇಡಿಕೆ ಹೆಚ್ಚುತ್ತಿರುವುದರಿಂದ ಕೊರತೆ ಉಂಟಾಗಿದೆ ಎಂದು ಒಪ್ಪಿಕೊಂಡರು.

ಕೋವಿಡ್ ಲಸಿಕೆ ಬಗ್ಗೆ ಟೀಕೆ ಮಾಡಿದವರೆಲ್ಲರೂ ಲಸಿಕೆ ಹಾಕಿಸಿಕೊಂಡಿದ್ದಾರೆ, ಪಾಪ ಇವರನ್ನು ನಂಬಿದ ಜನರು ಪ್ರಾರಂಭದಲ್ಲಿ ಸುಮ್ಮನಿದ್ದು ಕರೊನಾ ಉಲ್ಭಣಗೊಂಡ ಬಳಿಕ ಭಯಪಟ್ಟು ಲಸಿಕೆ ಹಾಕಿಸಿಕೊಳ್ಳಲು ಆಸಕ್ತಿ ತೋರುತ್ತಿರುವುದರಿಂದ ಬೇಡಿಕೆ ಹೆಚ್ಚಾಗಿದೆ. ಕೊರತೆ ಸರಿದೂಗಿಸಲು 18-44 ವರ್ಷ ಮೇಲ್ಪಟ್ಟವರಿಗೆ ತಾತ್ಕಾಲಿಕವಾಗಿ ಲಸಿಕೆ ನೀಡುವುದನ್ನು ಸ್ಥಗಿತಗೊಳಿಸಿ 2ನೇ ಡೋಸ್‌ಗಾಗಿ ಕಾಯುತ್ತಿರುವ 45 ವರ್ಷದಿಂದ 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಕೋವ್ಯಾಕ್ಸಿನ್ ಕೊರತೆ: ರಾಜ್ಯದಲ್ಲಿ ಕೋವಿಶೀಲ್ಡ್ ಲಸಿಕೆಗೆ ಕೊರತೆ ಇಲ್ಲ, ಕೋವ್ಯಾಕ್ಸಿನ್‌ಗೆ ಬೇಡಿಕೆ ಹೆಚ್ಚಾಗಿದೆ, ಬೇರೆ ರಾಜ್ಯದವರು ನಮಗಿಂತ ಮುಂಚೆ ಬೇಡಿಕೆ ಸಲ್ಲಿಸಿ ತರಿಸಿಕೊಂಡಿದ್ದಾರೆ, ನಾವೂ ಈಗಾಗಲೇ ಬೇಡಿಕೆ ಸಲ್ಲಿಸಿದ್ದು 3-4 ದಿನಗಳಲ್ಲಿ ಎಲ್ಲರಿಗೂ ಲಸಿಕೆ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಖಾಸಗಿ ಆಂಬುಲೆನ್ಸ್‌ಗಳ ಮಾಲೀಕರು ಮತ್ತು ಚಾಲಕರು ಕರೊನಾ ರೋಗಿಗಳಿಂದ ಹೆಚ್ಚು ಹಣ ಪಡೆಯುತ್ತಿರುವ ಬಗ್ಗೆ ಸಾಕಷ್ಟು ದೂರು ಬಂದಿರುವುದರಿಂದ ಅಂತಹ ಆಂಬುಲೆನ್ಸ್ ಮುಟ್ಟುಗೋಲು ಹಾಕಿಕೊಂಡು 108ಗೆ ಒಪ್ಪಿಸಿ ಸೇವೆಗೆ ಬಳಸಿಕೊಳ್ಳಲಾಗುವುದು ಎಂದರು. ಸಿಟಿ ಸ್ಕ್ಯಾನಿಂಗ್ ಪರೀಕ್ಷೆಗೆ ಸರ್ಕಾರ ನಿಗದಿಪಡಿಸುವ ಶುಲ್ಕವನ್ನೇ ಖಾಸಗಿಯವರು ಪಡೆಯಬೇಕು, ಕೋವಿಡ್ ಸಂದರ್ಭದಲ್ಲಿ ಸಾರ್ವಜನಿಕರಿಂದ ದುಬಾರಿ ಹಣ ಕೇಳುವುದು ಮಾನವೀಯತೆಯಲ್ಲ ಎಂದರು.

ಆಕ್ಸಿಜನ್ ಬೆಡ್ ಹೆಚ್ಚಳ: ಎಸ್ಸೆನ್ನಾರ್ ಜಿಲ್ಲಾಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ 50 ಆಕ್ಸಿಜನ್ ಸಹಿತ ಬೆಡ್ ವ್ಯವಸ್ಥೆಗೆ ಸಿದ್ಧತೆ ನಡೆದಿದ್ದು, ಅವಶ್ಯಕ ಸಲಕರಣೆಗಳು ಗುರುವಾರದೊಳಗೆ ಸರಬರಾಜಾಗಿ ಇನ್ನೊಂದು ವಾರದಲ್ಲಿ ಬೆಡ್ ವ್ಯವಸ್ಥೆ ಆಗಲಿದೆ. ಕೆಜಿಎಫ್‌ನಲ್ಲಿ 50 ಆಕ್ಸಿಜನ್‌ಸಹಿತ ಬೆಡ್‌ಗಳ ಜತೆ ಹೆಚ್ಚುವರಿಯಾಗಿ ಇನ್ನೂ 50 ಬೆಡ್ ವ್ಯವಸ್ಥೆಯಾಗಲಿದೆ, ತಾಲೂಕು ಕೇಂದ್ರದಲ್ಲೂ ಕೋವಿಡ್ ಬೆಡ್ ಸಂಖ್ಯೆ ಹೆಚ್ಚಿಸಲಾಗುತ್ತಿದೆ, ಜತೆಗೆ ಐಸಿಯು ಘಟಕದಲ್ಲಿ ವೆಂಟಿಲೇಟರ್‌ಗೆ ಕೊರತೆಯಾಗದಂತೆ ಹಂತ-ಹಂತವಾಗಿ ಸೌಲಭ್ಯ ಹೆಚ್ಚಿಸಲಾಗುವುದು ಎಂದರು.

ಸಂಸದ ಎಸ್.ಮುನಿಸ್ವಾಮಿ, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಪಂ ಸಿಇಒ ಎನ್.ಎಂ.ನಾಗರಾಜ್, ಎಸ್ಪಿ ಕಾರ್ತಿಕ್‌ರೆಡ್ಡಿ, ಎಎಸ್‌ಪಿ ಬಿ.ಎಂ.ನಾರಾಯಣಸ್ವಾಮಿ, ತಹಸೀಲ್ದಾರ್ ಶೋಭಿತಾ, ಡಿಎಚ್‌ಒ ಡಾ.ಎಸ್.ಎನ್.ವಿಜಯ್‌ಕುಮಾರ್, ಜಿಲ್ಲಾ ಸರ್ಜನ್ ಡಾ.ಜಗದೀಶ್, ಆರ್‌ಎಂಓ ಡಾ.ಬಾಲಸುಂದರ್, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್ ಉಪಸ್ಥಿತರಿದ್ದರು.

ಟೆಸ್ಟ್ ಮಾಡಿಸಿಕೊಂಡವರ ಮೊಬೈಲ್ ಸ್ವಿಚ್ಡ್ ಆಫ್?!: ಕೋವಿಡ್ ವಾರ್ ರೂಮ್‌ಗೆ ಭೇಟಿ ನೀಡಿದಾಗ ಟೆಸ್ಟ್ ಮಾಡಿಸಿಕೊಂಡಿರುವವರ ಪೈಕಿ ಶೇ.25ರಿಂದ 30 ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿರುವುದು, ನಕಲಿ ಮೊಬೈಲ್ ನಂಬರ್ ಮತ್ತು ಮನೆ ವಿಳಾಸ ಕೊಟ್ಟಿರುವುದು ಗಮನಕ್ಕೆ ಬಂದಿದೆ. ಇವರಿಂದ ನೆರೆ-ಹೊರೆಯವರಿಗೆ ಸೋಂಕು ಹರಡುವ ಸಾಧ್ಯತೆ ಇದ್ದು, ಮೊಬೈಲ್ ಟವರ್ ಟ್ಯ್ರಾಕ್ ಮಾಡಿ ಸಂಪರ್ಕಕ್ಕೆ ಸಿಗದವರನ್ನು ಹುಡುಕಿಕೊಡುವಂತೆ ಪೊಲೀಸರಿಗೆ ಮೊರೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅರವಿಂದ ಲಿಂಬಾವಳಿ ತಿಳಿಸಿದರು.

ಪರೀಕ್ಷೆಗೆ ಒಳಪಟ್ಟವರಿಗೆ ಪಾಸಿಟಿವ್ ಬಂದಿದ್ದರೆ ತಕ್ಷಣ ವಾರ್ ರೂಂಗೆ ಮಾಹಿತಿ ನೀಡಿದರೆ ವೈದ್ಯರು, ನರ್ಸ್, ಆಶಾ ಕಾರ್ಯಕರ್ತೆಯರನ್ನು ಹಾಗೂ ಟಾಸ್ಕ್ ಪೋರ್ಸ್ ಸದಸ್ಯರನ್ನು ಮನೆಗಳಿಗೆ ಕಳುಹಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ, ವಾರ್ ರೂಂಗೆ ಕರೆ ಮಾಡಿ ಸಿಬ್ಬಂದಿ ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಬೇಕು. ರೆಮ್‌ಡೆಸಿವರ್ ನಮ್ಮ ಜಿಲ್ಲೆಗೆ ತಕ್ಕಷ್ಟು ದಾಸ್ತಾನಿದೆ.

ಅರವಿಂದ ಲಿಂಬಾವಳಿ, ಜಿಲ್ಲಾ ಉಸ್ತುವಾರಿ ಸಚಿವ

ಕರೊನಾದಿಂದ ಜನರನ್ನು ರಕ್ಷಿಸಲು ಸರ್ಕಾರ ಶ್ರಮಿಸುತ್ತಿದೆ, ಟೆಸ್ಟ್ ಮಾಡಿಸಿಕೊಂಡಿರುವವರಲ್ಲಿ ಯಾರಿಗಾದರು ಪಾಸಿಟಿವ್ ಕಂಡು ಬಂದಿದ್ದಲ್ಲಿ ತಕ್ಷಣ ವಾರ್‌ರೂಮ್ ಸಂಪರ್ಕಿಸಿ ಚಿಕಿತ್ಸೆ ಪಡೆದು ಗುಣಮುಖರಾಗಬೇಕು, ಲಾಕ್ ಡೌನ್ ಉದ್ದೇಶ ಅರಿತು ಸೋಂಕು ತಡೆಗೆ ಸಹಕಾರ ನೀಡಬೇಕು, ಇಲ್ಲದಿದ್ದರೆ ಮತ್ತಷ್ಟು ಕಠಿಣ ಕ್ರಮ ಅನಿವಾರ್ಯವಾಗಬಹುದು ಎಂದು ಲಿಂಬಾವಳಿ ಹೇಳಿದರು.