ಕುಶಾಲನಗರ:
ನದಿ, ಪ್ರಕೃತಿ, ಸಂಸ್ಕೃತಿಯ ಪ್ರತೀಕವಾಗಿದ್ದು ಅವುಗಳು ನಾಶವಾಗದಂತೆ ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಹೇಳಿದರು. ಕುಶಾಲನಗರದಲ್ಲಿ ಕಾವೇರಿ ಆರತಿ ಬಳಗದಿಂದ ಮಂಗಳವಾರ ನಡೆದ 168ನೆಯ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರತಿಯೊಬ್ಬರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಬೇಕು. ಆ ಮೂಲಕ ಸ್ವಚ್ಛ ಗ್ರಾಮಗಳ ನಿರ್ಮಾಣ ಸಾಧ್ಯ ಎಂದರು. ಸ್ವಚ್ಛವಾಗಿ ಹರಿಯುವ ನದಿಯನ್ನು ನೇರವಾಗಿ ಕಲುಷಿತಗೊಳಿಸುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಜಾಗೃತರಾಗಬೇಕು. ಪ್ರಕೃತಿ ಹಾಗೂ ಜಲಮೂಲಗಳ ಆರಾಧನೆಯ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಸಾಧ್ಯ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ರಾಜ್ಯದ ಎಲ್ಲೆಡೆ ಸ್ವಚ್ಛತಾ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಅರ್ಚಕ ಕೃಷ್ಣಮೂರ್ತಿ ಭಟ್ ಕುಂಕುಮಾರ್ಚನೆ ಅಷ್ಟೋತ್ತರ ನಂತರ ಸಾಮೂಹಿಕವಾಗಿ ನದಿಗೆ ಆರತಿ ಬೆಳಗಿ ಮಾತನಾಡಿ, ಪ್ರತಿ ಹುಣ್ಣಿಮೆಯಂದು ನಿರಂತರವಾಗಿ ಕಾವೇರಿಗೆ ಮಹಾ ಆರತಿ ಬೆಳಗುವ ಮೂಲಕ ಜನರಿಗೆ ನದಿ ರಕ್ಷಣೆ ಬಗ್ಗೆ ಅರಿವು ಮಾಡಿಸುತ್ತಿರುವ ಬಳಗದ ಕಾರ್ಯವನ್ನು ಶ್ಲಾಘಿಸಿದರು.
ಈ ಸಂದರ್ಭ ಕಾವೇರಿ ಆರತಿ ಬಳಗದ ಆಶ್ರಯದಲ್ಲಿ ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಜನಜಾಗೃತಿ ವೇದಿಕೆ ಕಾರ್ಯಕರ್ತರು ನದಿ ಮತ್ತು ತಟದಲ್ಲಿ ತ್ಯಾಜ್ಯಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡರು. ಬಳಗದ ವತಿಯಿಂದ ಯೋಜನೆಯ ಜಿಲ್ಲಾ ನಿರ್ದೇಶಕಿ ಲೀಲಾವತಿ ಅವರನ್ನು ಸನ್ಮಾನಿಸಲಾಯಿತು.
ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರು, ಕುಶಾಲನಗರ ಡಿವೈಎಸ್‌ಪಿ ಆರ್. ವಿ. ಗಂಗಾಧರಪ್ಪ, ಅಯ್ಯಪ್ಪ ಸ್ವಾಮಿ ದೇವಾಲಯ ಟ್ರಸ್ಟ್ ಅಧ್ಯಕ್ಷ ಬಿ.ಪಿ. ಗಣಪತಿ, ಧರ್ಮಸ್ಥಳ ಯೋಜನೆಯ ಯೋಜನಾಧಿಕಾರಿ ರೋಹಿತ್, ವಲಯ ಮೇಲ್ವಿಚಾರಕಿ ಪೂರ್ಣಿಮಾ, ಜನಜಾಗೃತಿ ವೇದಿಕೆಯ ಸದಸ್ಯ ವಿ.ಡಿ. ಪುಂಡರಿಕಾಕ್ಷ, ಮಹಾ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್, ಡಿ. ಆರ್. ಸೋಮಶೇಖರ್, ಪವನ್, ಚೈತನ್ಯ, ಧರಣಿ ಸೋಮಯ್ಯ, ಧರ್ಮಸ್ಥಳ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿಗಳು, ಸದಸ್ಯರು, ಭೂಮಿಕ ಶ್ರೀ ಶಕ್ತಿ ಒಕ್ಕೂಟದ ಹಾಗೂ ತಾಲೂಕು ಸೌಂದರ್ಯವರ್ಧಕ ತಜ್ಞರ ಸಂಘದ ಸದಸ್ಯರುಗಳು ಇದ್ದರು.