ಜಿಲ್ಲೆ

ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಹರಿಕಾರ

ಶಿವರಾಜ.ಎಂ

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಬಡವರ, ಹಿಂದುಳಿದವರ, ದೀನ ದಲಿತರ ಅಭಿವೃದ್ಧಿಗೆ ಶ್ರಮಿಸಿದ ರಾಜ್ಯ ಕಂಡ ಧೀಮಂತ ನಾಯಕ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ರಾಜ್ಯಕ್ಕೆ ಅವರ ಕೊಡುಗೆ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ದೇವನಹಳ್ಳಿಯಲ್ಲಿ ಬುಧವಾರ ಆಯೋಜಿಸಿದ್ದ ಡಿ.ದೇವರಾಜ ಅರಸು ಜಯಂತಿಯಲ್ಲಿ ಅರಸು ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಡಿ.ದೇವರಾಜು ಅರಸು ಅವರು 1915 ರಲ್ಲಿ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಲ್ಲಹಳ್ಳಿಯಲ್ಲಿ ಜನಿಸಿದರು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಅಧ್ಯಯನ ಮಾಡಿ ಬಿಎಸ್ಸಿ ಪದವಿ ಪೂರ್ಣಗೊಳಿಸಿದ ನಂತರ, ಕಲ್ಲಹಳ್ಳಿಗೆ ಮರಳಿ ಕೃಷಿಯಲ್ಲಿ ತೊಡಗಿಸಿಕೊಂಡರು. ಅವರು 1952 ರಲ್ಲಿ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ರಾಜಕೀಯಕ್ಕೆ ಪ್ರವೇಶ ಮಾಡಿದರು. ವಿಧಾನಸಭೆಯಲ್ಲಿ 10 ವರ್ಷಗಳ ಕಾಲ ಶಾಸಕರಾಗಿದ್ದರು ಎಂದು ಅವರು ನಡೆದು ಬಂದ ಹಾದಿಯ ಬಗ್ಗೆ ವಿವರಿಸಿದರು. ಅರಸು ಅವರು ಎರಡು ಅವಧಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು, ಅಧಿಕಾರಾವಧಿಯ ವಿಷಯದಲ್ಲಿ ಕರ್ನಾಟಕದ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ವ್ಯಕ್ತಿ ಎಂಬ ಹೆಗ್ಗಳಿಕೆ ಇವರದ್ದು. ಅವರು ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿರುತ್ತಿರುವ ಸಮಯದಲ್ಲಿ ಮೈಸೂರು ಎಂಬುದು ಒಂದು ಪ್ರಾಂತ್ಯಕ್ಕೆ ಸೀಮಿತವಾಗಬಾರದು ಎಂದು 1973 ನವೆಂಬರರ 1 ರಂದು ಕರ್ನಾಟಕ ರಾಜ್ಯ ಎಂದು ಮರುನಾಮಕರಣ ಮಾಡಿದ ಮಹಾನಾಯಕರು ಇವರು ಮೃದು ಮತ್ತು ಮೌನ ಸ್ವಭಾವದ ವ್ಯಕ್ತಿತ್ವದವರು ಎಂದು ಬಣ್ಣಿಸಿದರು. ಡಿ.ದೇವರಾಜು ಅರಸು ಅವರ ಕೊಡುಗೆ, ಆದರ್ಶಗಳನ್ನು ನಾವೆಲ್ಲರೂ ಪಾಲಿಸುವುದರ ಜತೆಗೆ ರಾಜ್ಯದ ಅಭಿವೃದ್ಧಿಗೆ ನಾವೆಲ್ಲರೂ ಜತೆಯಾಗಿ ಸಾಗೋಣ ಎಂದು ಕರೆ ನೀಡಿದರು.

ನವಸಮಾಜಕ್ಕೆ ಬುನಾದಿ: ಸಂಪನ್ಮೂಲ ವ್ಯಕ್ತಿ ಬಿ.ಕೆ.ನಾರಾಯಣಸ್ವಾಮಿ ಮಾತನಾಡಿ, ಡಿ.ದೇವರಾಜು ಅರಸು ತಮ್ಮ ನಾಲ್ಕು ದಶಕಗಳ ಸಾರ್ವಜನಿಕ ಜೀವನದಲ್ಲಿ 8 ವರ್ಷಗಳ ಕಾಲ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದಾರೆ. ನವ ಸಮಾಜದ ನಿರ್ಮಾಣಕ್ಕಾಗಿ ಭದ್ರ ಬುನಾದಿ ಹಾಕಿದರು ಎಂದರು. ಇವರು ಶಿಕ್ಷಣವನ್ನು ಮುಗಿಸಿ ಕೃಷಿಯಲ್ಲಿ ಪಾಲ್ಗೊಂಡಿದ್ದರು, ಬಳಿಕ ಮೈಸೂರು ಸಂಸ್ಥಾನದ ಪ್ರಜಾಪ್ರತಿನಿಧಿ ಸಭೆಗೆ 1941ರಲ್ಲಿ ಚುನಾಯಿತರಾದರು, ಸ್ವಾತಂತ್ರ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಚಲೇ ಜಾವ್ ಚಳವಳಿಯಲ್ಲಿ ಭಾಗವಹಿಸಿದ್ದರು ಎಂದು ಸ್ಮರಿಸಿದರು. ಇವರು ಮಾನವತಾವಾದಿ, ವಿಚಾರವಾದಿ ಸಮಾಜದಲ್ಲಿ ಸಂಕಷ್ಟದಲ್ಲಿರುವ ಸಮುದಾಯಗಳಿಗೆ ಉತ್ತಮ ಜೀವನ ನಡೆಸಲು ವೃದ್ದಾಪ್ಯ ವೇತನ ಮತ್ತು ಮಾಸಾಶನ ಜಾರಿಗೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ. ಗ್ರಾಮಾಂತರ ಮಕ್ಕಳು ಆರೋಗ್ಯ ಮತ್ತು ಶಿಕ್ಷಣದಲ್ಲಿ ಯಾವುದೇ ಕಾರಣಕ್ಕೂ ವಂಚಿತರಾಗಬಾರದು ಎನ್ನುವುದು ಅವರ ಆಶಯ. ಹಿಂದುಳಿದ ವರ್ಗದವರಿಗೆ ಉಚಿತ ನಿವೇಶನ, ಮತ್ತು ಮನೆ ಕಟ್ಟಿಸಿ ಕೊಡುವುದು, ಇವರು ಬಡವರ ಕಲ್ಯಾಣಕ್ಕಾಗಿ ಶ್ರಮಿಸಿದ ಮಹಾನ್‌ನಾಯಕ ಎಂದರು. ಕನ್ನಡ ನಾಡಿನ ಮೇಲಿನ ಪ್ರೀತಿಯಿಂದ ಆರ್ಥಿಕ, ಸಾಮಾಜಿಕ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಕೊಡುಗೆಯನ್ನು ನೀಡಿದ್ದಾರೆ. ದುರ್ಬಲ ವರ್ಗಗಳ ಸಮುದಾಯದವರಿಗೆ ಆತ್ಮಾಭಿಮಾನ ಮೂಡಿಸಿದವರು ಎಂದು ಹೇಳಿದರು.