ಅರಸೀಕೆರೆ: ತಾಲೂಕಿನ ಹನ್ನೊಂದು ಕೇಂದ್ರಗಳಲ್ಲಿ ಮಾ21ರಿಂದ ನಡೆಯಲಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಹಸೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್ ಹೇಳಿದರು. ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ಪರೀಕ್ಷಾ ತಯಾರಿ ಕುರಿತಂತೆ ಇತ್ತೀಚೆಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.ತಾಲೂಕಿನಲ್ಲಿ ಸರ್ಕಾರಿ34, ಏಳು ವಸತಿ ಶಾಲೆ, ಅನುದಾನಿತ 36 ಹಾಗೂ ಅನುದಾನ ರಹಿತ 38 ಪ್ರೌಢಶಾಲೆಗಳಿವೆ. 1872 ಬಾಲಕರು,1801 ಬಾಲಕಿಯರು ಸೇರಿದಂತೆ 3673 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ನಗರದ ಸರ್ಕಾರಿ ಬಾಲಕ, ಬಾಲಕಿಯರ ಪ್ರೌಢಶಾಲೆ, ಬಸವೇಶ್ವರ, ಸಂತಮೇರಿ ಪ್ರೌಢಶಾಲೆಗಳಲ್ಲಿ ಪರೀಕ್ಷೆ ನಡೆಯಲಿದೆ. ಇನ್ನುಳಿದಂತೆ ಸರ್ಕಾರಿ ಪ್ರೌಢಶಾಲೆ ಬಾಣಾವರ, ಜಾವಗಲ್, ಗಂಡಸಿ ಸಂತೆ ಮೈದಾನ, ಹಾರನಹಳ್ಳಿ, ಚಿಂದೇನಹಳ್ಳಿ ಗಡಿ, ಡಿಎಂ ಕುರ್ಕೆ ಹಾಗೂ ಇಂದಿರಾಗಾಂಧಿ ವಸತಿ ಶಾಲೆ ರಾಮನಹಳ್ಳಿ ಕೇಂದ್ರದಲ್ಲಿ ಪರೀಕ್ಷೆ ಸುಸೂತ್ರವಾಗಿ ನಡೆಸಲು ಎಲ್ಲ ರೀತಿಯ ತಯಾರಿ ಮಾಡಿದ್ದೇವೆ. ಸಂಚಾರಿ ವಿಚಕ್ಷಣಾ ದಳ ನಿಯೋಜಿಸುವ ಮೂಲಕ ಹದ್ದಿನ ಕಣ್ಣಿರಿಸಲಾಗಿದೆ. ಪರೀಕ್ಷೆ ನಡೆಯುವ ದಿನ ಸುತ್ತಮುತ್ತಲಿನ ಜೆರಾಕ್ಸ್ ಕೇಂದ್ರ ಮುಚ್ಚಲು ಸೂಚಿಸಲಾಗಿದ್ದು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು. ಬಿಇಒ ಮೋಹನ್ ಕುಮಾರ್, ಪೌರಾಯುಕ್ತ ಕೃಷ್ಣಮೂರ್ತಿ, ತಾಲೂಕು ಆರೋಗ್ಯಾಧಿಕಾರಿ ಡಾ.ತಿಮ್ಮರಾಜು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು