ಜಿಲ್ಲೆ

ಅರಸಿ ಉದ್ಯಾನವನಕ್ಕೆ ನಿರ್ವಹಣೆ ಕೊರತೆ

ಪ್ರಸಿನ್ ಕೆ.ಆರ್

ಕಣಕಟ್ಟೆ ಕುಮಾರ್ ಅರಸೀಕೆರೆ ಗ್ರಾಮಾಂತರ
ನಗರಕ್ಕೆ ಹೊಂದಿಕೊಂಡಿರುವ ಅರಸಿ ಉದ್ಯಾನವನದಲ್ಲಿ ನಗರಸಭೆಯ ನಿರ್ಲಕ್ಷೃದಿಂದ ಅವ್ಯವಸ್ಥೆ ತಾಂಡವವಾಡುತ್ತಿದ್ದು, ನಿತ್ಯ ವಾಯುವಿಹಾರಕ್ಕೆ ಬರುವವರು ಕಿರಿಕಿರಿ ಅನುಭವಿಸುವಂತಾಗಿದೆ.

ನಗರಕ್ಕೆ ಹೊಂದಿಕೊಂಡಿರುವ ಕಂತೆನಹಳ್ಳಿ ಕೆರೆಗೂ, ನಗರದ ಜನತೆಗೂ ಮೊದಲಿನಿಂದಲೂ ಅವಿನಾಭಾವ ಸಂಬಂಧ. ಇದನ್ನು ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಶಾಸಕ ಶಿವಲಿಂಗೇಗೌಡ ಮುತುವರ್ಜಿಯಿಂದ ಕೆರೆಯ ಅಂಗಳದಲ್ಲಿ ‘ಅರಸಿ’ ಉದ್ಯಾನವನ ಹಾಗೂ ಎರಡು ಕಿಲೋಮೀಟರ್ ಉದ್ದನೆಯ ವಾಕಿಂಗ್ ರಸ್ತೆ ನಿರ್ಮಿಸಲಾಗಿದೆ. ಆದರೆ, ಇದರ ನಿರ್ವಹಣೆಯ ಜವಾಬ್ದಾರಿಯನ್ನು ನಗರಸಭೆ ಮರೆತಂತಿದೆ.

ಆರಂಭದ ದಿನಗಳಲ್ಲಿ ಅರಸಿ ಉದ್ಯಾನವನದ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡುತ್ತಿದ್ದ ನಗರಸಭೆ ಇತ್ತೀಚಿನ ದಿನಗಳಲ್ಲಿ ನಿರ್ಲಕ್ಷೃ ವಹಿಸಿದಂತೆ ಕಾಣುತ್ತದೆ. ಕಂತೆನಹಳ್ಳಿ, ಮಾರುತಿನಗರ, ಸೇರಿದಂತೆ ನಗರದ ನೂರಾರು ಜನರು ಬೆಳಗ್ಗೆ ವಾಕಿಂಗ್ ಗೆ ಪಾರ್ಕ್‌ನ್ನು ಬಳಸುತ್ತಾರೆ. ಆದರೆ, ವಾಕಿಂಗ್‌ಗೆ ಬರುವವರಿಗೆ ಹಿಂಡು ಹಿಂಡಾಗಿ ಕಾಣಿಸಿಕೊಳ್ಳುವ ಹಂದಿ, ಬೀದಿ ನಾಯಿಗಳು ಸ್ವಾಗತ ಕೋರುತ್ತಿವೆ. ವಾಕಿಂಗ್ ರಸ್ತೆಯ ಉದ್ದಕ್ಕೂ ಎರಡು ಬದಿ ಬೆಳೆದಿರುವ ಗಿಡಗಳ ಕೊಂಬೆ ಹಾಗೂ ಬಳ್ಳಿಗಳು ವಾಕಿಂಗ್ ಮಾಡುವವರಿಗೆ ಅಡ್ಡಿಪಡಿಸುತ್ತಿವೆ.

ಕುಡಿಯುವ ನೀರಿನ ವ್ಯವಸ್ಥೆ, ಶೌಚಗೃಹ ಇಲ್ಲದಿರುವುದು ಕೂಡ ಇನ್ನಷ್ಟು ಸಮಸ್ಯೆಗೆ ಕಾರಣವಾಗಿದೆ. ಉದ್ಯಾನವನದಲ್ಲಿ ಸಿಸಿ ಕ್ಯಾಮರಾ ಅಳವಡಿಕೆಯಾಗಲಿ, ಉದ್ಯಾನವನ ಪಾಲಕರಾಗಲಿ ಇಲ್ಲದಿರುವುದರಿಂದ ಅನೈತಿಕ ಚಟುವಟಿಕೆಗಳು ಹೆಚ್ಚಾಗಲು ಕಾರಣವಾಗಿದೆ. ಅಲ್ಲದೆ ಇತ್ತೀಚೆಗೆ ಹಿರಿಯ ನಾಗರಿಕರೊಬ್ಬರ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದೋಚಿರುವ ಪ್ರಕರಣವೂ ಹಸಿರಾಗಿದೆ. ಇಷ್ಟೆಲ್ಲಾ ಅವ್ಯವಸ್ಥೆಗಳು ನಡೆಯುತ್ತಿದ್ದರೂ ಸಂಬಂಧಪಟ್ಟವರು ಗಮನಹರಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.