ಜಿಲ್ಲೆ

ಒಳ ಮೀಸಲಾತಿ ಜಾರಿಗೊಳಿಸದಿದ್ದರೆ ಉಗ್ರ ಹೋರಾಟ

ಎ. ಆರ್. ರಘುರಾಮ

ಅರಸೀಕೆರೆ : ರಾಜ್ಯ ಸರ್ಕಾರ ಜೂನ್ ಎರಡನೇ ವಾರದಲ್ಲಿ ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಮಾದಿಗ ಸಮುದಾಯದ ಒಳ ಮೀಸಲಾತಿ ಹೋರಾಟ ಸಮಿತಿ ಮುಖಂಡರು ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಸಂಘಟನೆಯ ಮುಖಂಡ ಭಾಸ್ಕರ ಪ್ರಸಾದ್ ಮಾತನಾಡಿ, ನಮ್ಮ 35 ವರ್ಷಗಳ ಹೋರಾಟಕ್ಕೆ ಜೂನ್ 9 ರಂದು ನ್ಯಾಯ ದೊರೆಯಬೇಕು ಎಂದು ಒತ್ತಾಯಿಸಿ ಚಾಮರಾಜನಗರದಿಂದ ರಥ ಯಾತ್ರೆ ಆರಂಭಿಸಲಾಗಿದೆ. ಬೀದರ್ ಹಾಗೂ ಕೋಲಾರ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳ ಮೂಲಕ ಸಂಚರಿಸಿ ಸಂಚಲನ ಮೂಡಿಸಲಾಗುತ್ತಿದೆ ಎಂದರು. ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದೇ ಪ್ರತಿಭಟನೆ ನಡೆಸಲಾಗುತ್ತಿದೆ. ಎಲ್ಲೆಡೆ ಪೊಲೀಸರು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಆದರೆ ಅರಸೀಕೆರೆ ತಾಲೂಕಿನಲ್ಲಿ ಮಾತ್ರ ಪೊಲೀಸರು ರಥಯಾತ್ರೆಯನ್ನು ತರಾತುರಿಯಲ್ಲಿ ಮುಂದೆ ಸಾಗಹಾಕಲು ಯತ್ನಿಸುತ್ತಿರುವುದು ಖಂಡನೀಯ ಎಂದರು. ಪೊಲೀಸರ ಒತ್ತಡ ಹೆಚ್ಚಾದರೆ ರಸ್ತೆಯಲ್ಲೇ ಧರಣಿ ಕುಳಿತು ಪ್ರತಿಭಟನೆ ಮಾಡಬೇಕಾಗುತ್ತದೆ. ಹೋರಾಟಗಾರರಿಗೆ ಏನೇ ತೊಂದರೆಯಾದರೂ ಪೊಲೀಸರೇ ಹೊಣೆ ಆಗಬೇಕಾಗುತ್ತದೆ ಎಂದು ಭಾಸ್ಕರ್ ಪ್ರಸಾದ್ ಎಚ್ಚರಿಸಿದರು.