ತುಮಕೂರು: ಅರಣ್ಯ ರಕ್ಷಕರೇ ನಾಶ ಮಾಡುವುದಾದರೆ ಕಾಡು ಉಳಿಯುವುದಾದರೂ ಹೇಗೆ? ಸರ್ಕಾರದ ಕಾರ್ಯಕ್ರಮ ಅನುಷ್ಠಾನಗೊಳಿಸಲು ಇದ್ದ ಸ್ವಾಭಾವಿಕ ಕಾಡನ್ನು ನಾಶ ಮಾಡಿ ಕೃತ್ರಿಮ ಅರಣ್ಯ ಸೃಷ್ಟಿಗೆ ಮುಂದಾದ ಅರಣ್ಯಾಧಿಕಾರಿಗಳ ಅಂಧಾದರ್ಬಾರ್‌ಗೆ ಸಾವಿರಾರು ಮರಗಳು ನೆಲಕಚ್ಚಿವೆ.
ಚಿಕ್ಕನಾಯಕನಹಳ್ಳಿ ತಾಲೂಕು ದಸೂಡಿ ಗಸ್ತು 3174 ಎಕರೆ ಅರಣ್ಯ ಪ್ರದೇಶದ ನೂರಾರು ಎಕರೆಯಲ್ಲಿ ಸಾವಿರಾರು ಮರಗಳ ಮಾರಣಹೋಮ ಮಾಡಲಾಗಿದೆ. ಗೋವಾ-ಕರ್ನಾಟಕ ರಾಷ್ಟ್ರೀಯ ಹೆದ್ದಾರಿ 17ರ ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಹೋದ ಬೃಹತ್ ಮರಗಳಿಗೆ ಪರ್ಯಾಯವಾಗಿ ರಾಜ್ಯದ 300 ಹೆಕ್ಟೇರ್‌ನಲ್ಲಿ ನಿರ್ಮಿಸಲು ರೂಪಿಸಿರುವ ‘ಪರ್ಯಾಯ ನೆಡುತೋಪು’ ನಿರ್ಮಾಣಕ್ಕೆ ದಸೂಡಿ ಬಳಿ 122 ಹೆಕ್ಟೇರ್ ಗುರುತಿಸಲಾಗಿದ್ದು, ಹಣ ಖರ್ಚು ಮಾಡುವ ಸಲುವಾಗಿಯೇ ಮರ ಕಡಿದು ಖಾಲಿ ಜಾಗ ಸೃಷ್ಟಿಸುವ ಹುನ್ನಾರ ನಡೆದಿದೆ.
ರಂಗನಕೆರೆಯಿಂದ ವರ್ಷ ಪೂರ್ತಿ ತುಂಬಿರುವ ರಾಮಪ್ಪನ ಕಟ್ಟೆಗೆ ಸಂಪರ್ಕ ಕಲ್ಪಿಸಲು ರಸ್ತೆಯನ್ನು ಕೂಡ ಅರಣ್ಯದ ನಡುವೆಯೇ ಮಾಡಲಾಗುತ್ತಿದೆ. ದೇಶದ ವಿವಿಧೆಡೆ ಅಭಿವೃದ್ಧಿ ಕಾಮಗಾರಿ ಕಾರಣಕ್ಕೆ ನೆಲಕ್ಕುರುಳುವ ಮರಗಳಿಗೆ ಪರ್ಯಾಯವಾಗಿ ಶೇ.30ಕ್ಕಿಂತ ಕಡಿಮೆ ಮರಗಳಿರುವ ಕಾಡಿನಲ್ಲಿ ಪರ್ಯಾಯ ವನ ನಿರ್ಮಿಸಲು ಕೇಂದ್ರ ಸರ್ಕಾರ ಹೆಕ್ಟೇರ್‌ಗೆ 18 ಸಾವಿರ ರೂ. ಅನುದಾನ ನೀಡುತ್ತಿದೆ. ಈ ಅನುದಾನವನ್ನು ಅರಣ್ಯ ಇಲಾಖೆ ವತಿಯಿಂದಲೇ ಖರ್ಚು ಮಾಡಲಾಗುತ್ತಿದೆ. ಆದರೆ ಯೋಜನೆಯ ಉದ್ದೇಶವೇ ಅರ್ಥವಾಗದವರಂತೆ ಇರುವ ಕಾಡು ಇಲ್ಲವಾಗಿಸಿ ಕಾರ್ಯಕ್ರಮ ಅನುಷ್ಠಾನ ಮಾಡುವ ಬುದ್ಧಿವಂತಿಕೆಯನ್ನು ಅರಣ್ಯ ಇಲಾಖೆ ತೋರಿದೆ.
ಈ ಅರಣ್ಯದ ವಿಶೇಷ ‘ಕಮರಾ’: ದಸೂಡಿ ವಲಯದ ಅರಣ್ಯದಲ್ಲಿ ‘ಕಮರಾ’ ಹೆಸರಿನ ವಿಶೇಷ ಜಾತಿಯ ಮರಗಳಿದ್ದು, ಇದರ ಆಯಸ್ಸು ಕೂಡ ಜಾಸ್ತಿ. ಹಾಗಾಗಿ, ರಾಜ್ಯದೆಲ್ಲೆಡೆ ಕಮರಾ ಸಸಿ ನೆಡುವ ಕಾರ್ಯಕ್ರಮವನ್ನು ಸರ್ಕಾರ ಮಾಡುತ್ತಿದೆ, ಇಂತಹ ವಿಶೇಷವಿರುವ ಮರಗಳನ್ನು ಕಡಿದು 122 ಹೆಕ್ಟೇರ್‌ನಲ್ಲಿ ಶ್ರೀಗಂಧ, ರಕ್ತಚಂದನ, ಹೊನ್ನೆ, ಬೀಟೆ, ಬೆಟ್ಟದ ನೆಲ್ಲಿ ನೆಡುವ ಅಧಿಕಾರಿಗಳ ನಡೆ ಅನುಮಾನ ಸೃಷ್ಟಿಸಿದೆ.
ಸ್ಥಳೀಯರಿಗೆ ಮಾಹಿತಿಯೇ ಇಲ್ಲ!: ಜಾಣೆ ಸೇರಿ ಸಾಕಷ್ಟು ಔಷಧೀಯ ಸಸ್ಯಗಳು ಹಾಗೂ ಈ ಭೂಭಾಗದಲ್ಲಿ ಬೆಳೆಯುವ ಉದೇದ ಗಿಡ, ಕಮರಾ, ದಿಂಡಗ ಮತ್ತಿತರ ಗಿಡಗಳನ್ನು ಬುಡಮೇಲು ಮಾಡಿದ್ದರೂ ಸ್ಥಳೀಯರಿಗೆ ಮಾಹಿತಿಯೇ ಇಲ್ಲ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮ ಅನುಷ್ಠಾನವಾಗಿದ್ದರೂ ಕನಿಷ್ಠ ಗ್ರಾಮಸಭೆ ನಡೆಸಿ ಜನರಿಗೆ ಮಾಹಿತಿ ನೀಡುವ ಕೆಲಸವನ್ನು ಅರಣ್ಯ ಇಲಾಖೆ ಮಾಡಿಲ್ಲ, ಸ್ಥಳೀಯರೊಂದಿಗೆ ಸದಾ ಸಂಘರ್ಷ ನಡೆಸುವ ಅಧಿಕಾರಿಗಳು ಪರ್ಯಾಯ ನೆಡುತೋಪು ಹೆಸರಿನಲ್ಲಿ ಲಕ್ಷಾಂತರ ರೂ. ಅವ್ಯವಹಾರ ನಡೆಸಿದ್ದಾರೆ. ಜತೆಗೆ ಸಹಜವಾಗಿ ಬೆಳೆದಿರುವ ಅರಣ್ಯ ನಾಶ ಮಾಡಿದ್ದಾರೆ ಎಂದು ಸ್ಥಳೀಯರು ನೇರವಾಗಿ ಆರೋಪಿಸುತ್ತಾರೆ.
ಶೇ.30ಕ್ಕಿಂತ ಕಡಿಮೆ ಅರಣ್ಯವಿರುವಲ್ಲಿ ಗಿಡ ಬೆಳೆಸಲು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ದಸೂಡಿ ವಲಯದ 120 ಹೆಕ್ಟೇರ್‌ನಲ್ಲಿ ಅನುಷ್ಠಾನವಾಗುತ್ತಿದೆ, ಇದರ ನೆಪದಲ್ಲಿ ಮರ ಕಡಿದಿರುವ ಬಗ್ಗೆ ಸ್ಥಳೀಯರ ದೂರಿನ ಬಗ್ಗೆ ಪರಿಶೀಲಿಸಲಾಗುವುದು, ಗಿಡ ಬೆಳೆಸುವುದು ಯೋಜನೆಯ ಉದ್ದೇಶವಾಗಿದ್ದು ಶೀಘ್ರವೇ ಗ್ರಾಮಸಭೆ ಆಯೋಜಿಸಿ ಜನರ ಅಭಿಪ್ರಾಯ ಪಡೆಯುತ್ತೇನೆ. ಗಿರೀಶ್ ಡಿಎಫ್‌ಒ ಲಕ್ಷಾಂತರ ಮರ ಉರುಳಿಸಿರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು, ನಾವು ಸೌದೆಗೆ ತುಂಡು ತೆಗೆದುಕೊಂಡು ಹೋದರೆ ಕೇಸ್ ದಾಖಲಿಸುವ ಅಧಿಕಾರಿಗಳೇ ನಾಶಮಾಡುವುದಾದರೆ ಕಾಡು ಉಳಿಯುವುದಾದರೂ ಹೇಗೆ? ಕಾಡಿನೊಳಗೆ ಯಾರೂ ಬರುವುದಿಲ್ಲ. ಇವರೇ ಕಡಿದು ಖಾಲಿ ಜಾಗ ಸೃಷ್ಟಿಸಿ, ಹೊಸ ಗಿಡ ನೆಡುತ್ತಿದ್ದಾರೆ. ಇದೊಂದು ಹಗಲು ದರೋಡೆ. ಚಂದ್ರನಾಯ್ಕ ದಸೂಡಿ ಇದ್ದ ಮರ ಕಡಿದು ಹೊಸ ಗಿಡ ಬೆಳೆಸುತ್ತೇವೆ ಎಂಬ ಅಧಿಕಾರಿಗಳ ಮಾತೇ ಅರ್ಥವಾಗುತ್ತಿಲ್ಲ, ಜನ, ಜಾನುವಾರುಗಳಿಗೆ ನಾವು ಜಾಣೆ ಮತ್ತಿತರ ಗಿಡದ ಸೊಪ್ಪು, ಬೇರು ಬಳಸಿ ಔಷಧ ಸಿದ್ಧಪಡಿಸುತ್ತೇನೆ. ಇಲ್ಲಿ ಬೆಳೆಯುವ ಗಿಡ ನಾಶಪಡಿಸಿ ಪರದೇಶದ ಗಿಡ ತಂದು ಬೆಳೆಯುವ ಹಠವೇಕೆ? ನಮ್ಮ ಕಾಡಿನ ಮರ ಕಡಿದ ಕಾರಣ ತಿಳಿಸಲಿ. ಮೋತಿಲಾಲ್ ಸ್ಥಳೀಯ ನಿವಾಸಿ