ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ರಾಜ್ಯರಾಜಧಾನಿ ಬೆಂಗಳೂರನ್ನು ಕಾಡುತ್ತಿರುವ ಕಸದ ಸಮಸ್ಯೆ ಮೆಲ್ಲನೆ ಗ್ರಾಮಾಂತರ ಭಾಗಕ್ಕೂ ಹೆಜ್ಜೆ ಇಡುತ್ತಿದೆ. ಈ ನಿಟ್ಟಿನಲ್ಲಿ ಕಸದ ಸಮಸ್ಯೆಯನ್ನು ಮೂಲದಲ್ಲೇ ಪರಿಹರಿಸಲು ವಿಕಾಸ ಗ್ರಾಮ ಯೋಜನೆಯಡಿ ಪಂಚಾಯಿತಿವಾರು ಘನತ್ಯಾಜ್ಯ ವಿಲೇವಾರಿ ಘಟಕ ಆರಂಭಿಸಲಾಗಿದೆ. ಆದರೆ, ಈ ತ್ಯಾಜ್ಯ ವಿಲೇವಾರಿ ಘಟಕಗಳು ಬಹುತೇಕ ಕಡೆ ನಿರ್ವಹಣೆ ಕೊರತೆ ಎದುರಿಸುತ್ತಿದ್ದು, ಕಸ ಸಮಸ್ಯೆ ಉಲ್ಭಣವಾಗದಂತೆ ತಡೆಯುವ ನಿಟ್ಟಿನಲ್ಲಿ ರೂಪಿಸಿರುವ ಯೋಜನೆ ಆಶಯವನ್ನೇ ಕಳೆದುಕೊಳ್ಳುವಂತಾಗಿದೆ.
ಇದಕ್ಕೆ ಪ್ರತ್ಯಕ್ಷ ನಿದರ್ಶನವಾಗಿ ದೊಡ್ಡಬಳ್ಳಾಪುರ ತಾಲೂಕಿನ ಅರಳುಮಲ್ಲಿಗೆ ಗ್ರಾಪಂ ವ್ಯಾಪ್ತಿಯ ಆಲಹಳ್ಳಿ ಗ್ರಾಮದಲ್ಲಿ ಸ್ಥಾಪಿಸಿರುವ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ವಹಣೆ ಕೊರತೆಯಿಂದ ಮೂಲ ಉದ್ದೇಶಕ್ಕೆ ಎಳ್ಳುನೀರು ಬಿಟ್ಟಿದೆ. ಹಸಿ, ಒಣ ಹಾಗೂ ವೈದ್ಯಕೀಯ ತ್ಯಾಜ್ಯ ವಿಂಗಡಣೆಗೆ ಪ್ರತ್ಯೇಕ ವಿಭಾಗಗಳಿದ್ದರೂ ಎಲ್ಲವನ್ನೂ ಮಿಶ್ರಣ ಮಾಡಿದ ರೀತಿಯಲ್ಲೇ ಕಸವನ್ನು ಹರಡಿರುವುದು ಕಂಡುಬರುತ್ತಿದೆ.
ನಿಷ್ಪ್ರಯೋಜಕ ಘಟಕ! ಪಂಚಾಯಿತಿ ವ್ಯಾಪ್ತಿಯ ಅಷ್ಟೂ ಗ್ರಾಮಗಳ ವಿಂಗಡಿಸಿದ ಕಸ ಸಂಗ್ರಹಿಸಿ ಇಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ ಸುಮಾರು7 ಲಕ್ಷ ರೂ. ವೆಚ್ಚದಲ್ಲಿ ಘನತ್ಯಾಜ್ಯ ಘಟಕವನ್ನು ನಿರ್ಮಾಣ ಮಾಡಲಾಗಿದೆ. ಆದರೆ ಈ ಘಟಕ ಇದ್ದೂ ನಿಷ್ಪ್ರಯೋಜಕವಾಗಿದೆ. ವೈದ್ಯಕೀಯ ತ್ಯಾಜ್ಯ, ಪ್ಲಾಸ್ಟಿಕ್ ತ್ಯಾಜ್ಯ ಕಸದೊಂದಿಗೆ ಮಿಶ್ರಣಗೊಂಡು ಸುತ್ತಮುತ್ತಲ ಪರಿಸರದಲ್ಲಿ ಗಬ್ಬುವಾಸನೆ ಹರಡುವಂತಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿ ಹಳ್ಳಿಗಳಲ್ಲಿಯೂ ಕಸ ಸಂಗ್ರಹಿಸಿ ವಿಂಗಡಣೆ ಮಾಡಲು ಈ ಘಟಕ ಸ್ಥಾಪಿತವಾಗಿದ್ದರೂ ಇಂಥ ಯಾವುದೇ ಪ್ರಕ್ರಿಯೆ ನಡೆಯದಿರುವುದು ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯನ್ನು ಬೊಟ್ಟು ಮಾಡುತ್ತಿದೆ. ಸಂಬಂಧಪಟ್ಟ ಸಿಬ್ಬಂದಿ ಕಸ ಸಂಗ್ರಹ ಮಾಡಿ ಗ್ರಾಮದ ಹೊರಗೆ ಬೇಕಾಬಿಟ್ಟಿ ತಂದು ಸುರಿಯುತ್ತಿದ್ದಾರೆ. ಹೀಗಾಗಿ ಘನತ್ಯಾಜ್ಯ ವಿಲೇವಾರಿ ಘಟಕದ ಉದ್ದೇಶವೇ ಬುಡಮೇಲಾಗಿದೆ.
ಜಲಮೂಲಗಳಿಗೆ ಕಸ: ಸಿಬ್ಬಂದಿ ಸಮರ್ಪಕವಾಗಿ ಕಸ ವಿಂಗಡಣೆ ಮಾಡುತ್ತಿಲ್ಲ. ಬೇಕಾದಷ್ಟು ಪ್ಲಾಸ್ಟಿಕ್ ಮತ್ತಿತರ ಕಸ ಬೇರ್ಪಡಿಸಿ ಮಾರಾಟ ಮಾಡುತ್ತಾರೆ. ಉಳಿದಿದ್ದನ್ನು ಅಲ್ಲಿಯೇ ಎಸೆಯುತ್ತಿದ್ದಾರೆ. ಈಗ ಮಳೆಗಾಲ ಆಗಿರುವುದರಿಂದ ಉಳಿಕೆ ತ್ಯಾಜ್ಯ ನೀರಿನಲ್ಲಿ ಕೊಚ್ಚಿಹೋಗಿ ಕೆರೆ ಕುಂಟೆಗಳಿಗೆ ಸೇರುತ್ತಿದೆ. ಇದರಿಂದ ಗ್ರಾಮಗಳ ಜಲಮೂಲಗಳಿಗೂ ತ್ಯಾಜ್ಯ ಘಟಕ ಕಂಟಕವಾಗಿದೆ.
ವೈದ್ಯಕೀಯ ತ್ಯಾಜ್ಯ ಎಲ್ಲಿಂದ ಬಂತು? ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಆಸ್ಪತ್ರೆಗಳೇ ಇಲ್ಲ, ಆದರೂ ಇಷ್ಟೊಂದು ಪ್ರಮಾಣದಲ್ಲಿ ವೈದ್ಯಕೀಯ ತ್ಯಾಜ್ಯ ಇಲ್ಲಿ ಶೇಖರವಾಗಲು ಹೇಗೆ ಸಾಧ್ಯ ಎಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ. ಸಿರಿಂಜ್, ಟಾನಿಕ್ ಬಾಟಲಿ, ಕೈಗವಸು ಸೇರಿ ಇನ್ನಿತರ ವೈದ್ಯಕೀಯ ತ್ಯಾಜ್ಯ ರಾಶಿಗಟ್ಟಲೆ ಕಂಡುಬರುತ್ತಿದೆ. ಇದು ಹಸಿ ಹಾಗೂ ಪ್ಲಾಸ್ಟಿಕ್ ತ್ಯಾಜ್ಯದೊಂದಿಗೆ ಮಿಶ್ರಣಗೊಂಡಿದೆ.
ಬೆಂಕಿ ಹಚ್ಚುತ್ತಾರೆ: ಕಸ ವಿಂಗಡಣೆ ಕಡೆಗಣಿಸಿರುವ ಸಿಬ್ಬಂದಿ ಎಲ್ಲ ಕಸ ಮಿಶ್ರಣ ಮಾಡಿ ಘಟಕದ ಸಮೀಪವೇ ಬೆಂಕಿ ಹಚ್ಚಿ ಕಸ ಕರಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ. ಸುಟ್ಟ ಕಸದಿಂದ ಹೊರಬರುವ ವಿಷಕಾರಿ ಹೊಗೆಯಿಂದ ಈ ಭಾಗದ ಸುತ್ತಮುತ್ತಲ ಗ್ರಾಮಸ್ಥರು ಅನಾರೋಗ್ಯ ಭೀತಿ ಎದುರಿಸುವಂತಾಗಿದೆ. ಕಸ ಸುಟ್ಟ ಬೂದಿ ಮಳೆ ನೀರಿನೊಂದಿಗೆ ಬೆರೆತು ಜಲಮೂಲ ಸೇರುತ್ತಿದೆೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.
ಮೂಲದಲ್ಲೇ ಕಸದ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಕಸ ಘಟಕಗಳನ್ನು ಸ್ಥಾಪಿಸಲಾಗಿದೆ, ಆದರೆ ಇದನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿರುವುದು ಅಕ್ಷಮ್ಯ. ಅರಳುಮಲ್ಲಿಗೆ ಪಂಚಾಯಿತಿ ವ್ಯಾಪ್ತಿಯ ಆಲಹಳ್ಳಿ ಕಸ ಘಟಕ ನಿರ್ವಹಣೆ ಕೊರತೆ ಬಗ್ಗೆ ಗಮನಕ್ಕೆ ಬಂದಿರಲಿಲ್ಲ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು. ಸಮಸ್ಯೆ ಪುನಾವರ್ತನೆಯಾಗದಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗುವುದು.
ವರ್ಣಿತ್‌ನೇಗಿ, ಜಿಪಂ ಸಿಇಒ
ಈ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ, ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಪರಿಹಾರಕ್ಕೆ ತಕ್ಷಣ ಕ್ರಮಕೈಗೊಳ್ಳಲಾಗುವುದು. ಕಸದ ಸಮಸ್ಯೆ ಮೂಲದಲ್ಲೇ ಪರಿಹಾರವಾಗಬೇಕು ಇಲ್ಲವಾದರೆ ಅದೇ ಮುಂದೆ ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು, ನಿರ್ಲಕ್ಷ್ಯ ವಹಿಸಿದರೆ ಕ್ರಮಕೈಗೊಳ್ಳಲಾಗುವುದು.
ಧೀರಜ್ ಮುನಿರಾಜು, ಶಾಸಕ ದೊಡ್ಡಬಳ್ಳಾಪುರ