ಜಿಲ್ಲೆ

ರಾಮನಾಥಪುರದ ಶ್ರೀ ರಾಮೇಶ್ವರ ದೇವಾಲಯ ಜೀರ್ಣೋದ್ದಾರಕ್ಕಾಗಿ ಅನುದಾನ: ಡಿಸಿ ಭರವಸೆ

ಅರಕಲಗೂಡು: ತಾಲೂಕಿನ ಪ್ರಮುಖ ಪ್ರೇಕ್ಷಣೀಯ ಪ್ರವಾಸಿ ತಾಣವಾದ ರಾಮನಾಥಪುರದ ಐತಿಹಾಸಿಕ ದೇವಾಲಯಗಳಿಗೆ ಜಿಲ್ಲಾಧಿಕಾರಿ ಆರ್. ಗಿರೀಶ್ ಭಾನುವಾರ ಭೇಟಿ ನೀಡಿ ವೀಕ್ಷಿಸಿ ಪುರಾತನ ಕಾಲದ ಸೂಕ್ಷ್ಮ ಕುಸುರಿ ಕೆತ್ತನೆಯ ಶಿಲ್ಪಕಲಾ ಸೊಬಗಿಗೆ ಬೆರಗಾದರು.

ಹಂಪಾಪುರದಲ್ಲಿ ಶನಿವಾರ ಜಿಲ್ಲಾಧಿಕಾರಿ ನಡೆ ಗ್ರಾಮದ ಕಡೆ ಕಾರ್ಯಕ್ರಮ ಮುಗಿಸಿ ಜೆ.ಹೊಸಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದ ಆರ್. ಗಿರೀಶ್ ಅವರು ಇಂದು ಬೆಳಗ್ಗೆ ರಾಮನಾಥಪುರದ ಪುರಾಣ ಪ್ರಸಿದ್ದ ಶ್ರೀ ರಾಮೇಶ್ವರ, ಪ್ರಸನ್ನ ಸುಬ್ರಹ್ಮಣ್ಯೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಕಾವೇರಿ ನದಿ ವಹ್ನಿಪುಷ್ಕರಕ್ಕೆ ತೆರಳಿ ನೀರಿನಲ್ಲಿ ಈಜಾಡುತ್ತಿದ್ದ ಬಗೆ ಬಗೆಯ ಮೀನುಗಳ ರಾಶಿ ಕಣ್ತುಂಬಿಕೊಂಡರು.

ಶ್ರೀ ರಾಮೇಶ್ವರ ದೇವಾಲಯ ಜೀರ್ಣೋದ್ದಾರಕ್ಕಾಗಿ ಪುರಾತತ್ವ ಇಲಾಖೆ ೪.೮೦ ಕೋಟಿ ರೂ ಅಂದಾಜಿ ಪಟ್ಟಿ ತಯಾರಿಸಿ ಪ್ರವಾಸೋದ್ಯಮ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. ಈ ಅನುದಾನ ಮಂಜೂರು ಮಾಡಿಸುವಂತೆ ಕಾವೇರಿ ನದಿ‌ ಸ್ವಚ್ಚತಾ ಆಂದೋಲನ‌ ಸಮಿತಿಯವರು ಸಲ್ಲಿಸಿದ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಗಿರೀಶ್ ಅವರು, ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಐತಿಹಾಸಿಕ ದೇವಾಲಯಗಳಲ್ಲಿ ಸ್ವಚ್ಚತೆ ಕಾಪಾಡಿ ಪ್ರವಾಸಿಗರು ಮತ್ತು ಭಕ್ತರಿಗೆ ಅನುಕೂಲ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಕಲೇಶಪುರ ಉಪ ವಿಭಾಗಾಧಿಕಾರಿ ಗಿರೀಶ್ ನಂದನ್, ತಹಸೀಲ್ದಾರ್ ವೈ.ಎಂ. ರೇಣುಕುಮಾರ್, ರಾಜಸ್ವ ನಿರೀಕ್ಷಕ ಸಿ.‌ ಸ್ವಾಮಿ, ಉಪ ತಹಸೀಲ್ದಾರ್ ನಂಜೇಗೌಡ, ಗ್ರಾಮ ಲೆಕ್ಕಾಧಿಕಾರಿ ಧರ್ಮೇಶ್, ಯಾದವ್, ಕಾವೇರಿ ಸ್ವಚ್ಚತಾ ಆಂದೋಲನ ಸಮಿತಿಯ ಕುಮಾರಸ್ವಾಮಿ, ಸಿದ್ದಯ್ಯ, ಕಾಳಾಬೋಯಿ, ರಘು, ಆಶ್ವಿನ್ ಭಾರದ್ವಜ್, ಸ್ಥಳೀಯರು ಇದ್ದರು.