ಅರಕೇರಾ: ಮನುಷ್ಯನ ಸ್ವಾರ್ಥದಿಂದ ಪರಿಸರ ನಾಶವಾಗುತ್ತಿದೆ. ಗಿಡ, ಮರಗಳ ಬೆಳಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಎಸ್‌ಕೆಡಿಆರ್‌ಡಿಪಿ ಯೋಜನಾಧಿಕಾರಿ ವೇಣುಗೋಪಾಲ್ ಹೇಳಿದರು.
ತಾಲೂಕಿನ ಮುಂಡರಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ (ಎಸ್‌ಕೆಡಿಆರ್‌ಡಿಪಿ) ಆಯೋಜಿಸಿದ್ದ ಪರಿಸರ ಮಾಹಿತಿ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.
ಪರಿಸರ ಸಂರಕ್ಷಣೆಯಿಂದ ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗೆ ಭೂಮಿಯನ್ನು ರಕ್ಷಿಸಲು ಸಹಕಾರಿಯಾಗುತ್ತದೆ. ನೈಸರ್ಗಿಕ ನಾಶವು ಭೂಮಿಯ ಅಳಿವಿನಂಚಿಗೆ ಕೊಂಡೊಯ್ಯುತ್ತದೆ. ಪ್ರಕೃತಿಯಲ್ಲಿ ಆಗುತ್ತಿರುವ ದುರಂತಗಳನ್ನು ತಪ್ಪಿಸಲು ಪರಿಸರ ಸಂರಕ್ಷಣೆಯೊಂದೇ ಮಾರ್ಗಎಂದ ಅವರು, ತಾಲೂಕಿನಲ್ಲಿ 10 ಶಾಲೆಗಳನ್ನು ಆಯ್ಕೆ ಮಾಡಿಕೊಂಡಿದ್ದು, ಪ್ರತಿ ಶಾಲೆಗೆ 100 ಸಸಿಗಳನ್ನು ವಿತರಿಸುವ ಕಾರ್ಯ ನಡೆಯುತ್ತಿದೆ ಎಂದರು.
ಕೃಷಿ ಅಧಿಕಾರಿ ಹುಚ್ಚಪ್ಪ ಮಾತನಾಡಿ, ಗಿಡ, ಮರಗಳನ್ನು ಕಡಿಯುವುದರಿಂದ ಜಾಗತಿಕ ತಾಪಮಾನ ಹೆಚ್ಚಾಗಿ ಮನುಷ್ಯನ ಮೇಲೆ ಅಡ್ಡಪರಿಣಾಮಗಳು ಬೀರುತ್ತವೆ. ಪ್ರಕೃತಿ ಮುನಿಸಾದರೇ ಸಕಲ ಜೀವರಾಶಿಗಳು ಬದುಕುವುದು ಅಸಾಧ್ಯ ಎಂದರು. ಮುಖ್ಯ ಶಿಕ್ಷಕಿ ಗೀತಾ, ಸಹ ಶಿಕ್ಷಕರಾದ ಶರಣಮ್ಮ, ರಾಜು, ವಲಯ ಮೇಲ್ವಿಚಾರಕ ಭರತ ಕುಮಾರ, ಸೇವಾ ಪ್ರತಿನಿಧಿ ಉಮಾಕಾಂತ, ವಿಎಲ್‌ಇ ಅತಿಥಿ ಶಿಕ್ಷಕರಾದ ಶಿವಕುಮಾರ, ಕಲಾವತಿ ಇತರಿರದ್ದರು.