ಅರಕೇರಾ: ಕಣ್ಣುಗಳು ಎರಡಿದ್ದರೂ ದೃಷ್ಟಿ ಒಂದೇ ಎಂಬಂತೆ ಸಂಸಾರದಲ್ಲಿ ಸತಿ-ಪತಿಯ ಮನಸ್ಸು ಒಂದಾಗಿದ್ದರೆ ಬದುಕು ಬಂಗಾರವಾಗುತ್ತದೆ ಎಂದು ನೀಲಗಲ್ ಬೃಹನ್ಮಠದ ಅಭಿನವ ಶ್ರೀ ರೇಣುಕ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಹೆಗ್ಗಡದಿನ್ನಿ ಗ್ರಾಮದ ಶ್ರೀ ವೀರಭದ್ರ ಸ್ವಾಮಿಗಳ ಜಾತ್ರೋತ್ಸವ ಹಾಗೂ ಮಹಾ ಶಿವರಾತ್ರಿ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ದಾಂಪತ್ಯದಲ್ಲಿ ಸತಿ-ಪತಿ ಆಲೋಚನೆ ಒಂದೇ ಆಗಿರಬೇಕು. ವಿಚಾರಗಳು ಭಿನ್ನವಾಗಿದ್ದರೆ, ಬದುಕುವ ಮಾರ್ಗ ಬದಲಾಗುತ್ತದೆ. ಸ್ವರ್ಗ ನರಕಗಳು ಇಲ್ಲ, ಅವು ಮಾನವನ ಹೃದಯ, ನಾಲಿಗೆಯಲ್ಲಿವೆ. ಹೃದಯದಲ್ಲಿ ದ್ವೇಷವಿದ್ದರೆ ಬದುಕು ನರಕವಾಗುತ್ತದೆ. ಅಂತರಂಗ ಉತ್ತಮವಾಗಿದ್ದರೆ ಮಾತು, ಕೃತಿಗಳು ಸಾತ್ವಿಕವಾಗಿರುತ್ತವೆ. ಕಷ್ಟ ಸಹಿಸಿಕೊಂಡವರು ಜೀವನದಲ್ಲಿ ಜಯ ಸಾಧಿಸುತ್ತಾರೆ ಎಂದರು.
ಮಹಾಮಠದ ಪೀಠಾಧಿಪತಿ ಕಲಿಗಣನಾಥ ಸ್ವಾಮೀಜಿ ಮಾತನಾಡಿ, ಹೂ-ದಾರ ಒಂದಾಗಿ ಹಾರವಾಗುವಂತೆ, ಪತಿ ಮತ್ತು ಸತಿ ಜೀವನದಲ್ಲಿ ಒಬ್ಬರಿಗೊಬ್ಬರು ಅರಿತು ಅನೋನ್ಯವಾಗಿ ಜೀವನ ಸಾಗಿಸಬೇಕು. ಆಡಂಬರದ ಮದುವೆಗೆ ಆದ್ಯತೆ ನೀಡದೆ ಸರಳ ಮದುವೆ ನಡೆಸಿ ಬಡವರಿಗೆ ಶ್ರೀಮಠ ನೆಲೆಯಾಗಿದೆ ಎಂದರು.
21 ನವ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ದೇವಸ್ಥಾನದಲ್ಲಿ ಬೆಳಗ್ಗೆಯಿಂದ ಧಾರ್ಮಿಕ ಕೈಂಕರ್ಯಗಳು ಜರುಗಿದವು. ಭೂರಿಗಣಾರಾಧನೆ ಮತ್ತು ಭಕ್ತರಿಗೆ ಅನ್ನ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಾಯಂಕಾಲ ಹೂವಿನ ಪೂಜೆ ಮತ್ತು ಮಹಾಮಂಗಳಾರತಿ ನೆರವೇರಿದವು.