ಅರಕೇರಾದಲ್ಲಿ ಹಿಂದು ಯುವಕರು ಏರ್ಪಡಿಸಿದ್ದ ಇಫ್ತಿಯಾರ್ ಕೂಟದಲ್ಲಿ ಮುಸ್ಲಿಮರು ಕೇಸರಿ ಶಾಲು ಧರಿಸಿ ಪಾಲ್ಗೊಂಡಿರುವುದು. ಗೆಳೆಯರ ಬಳಗದ ಮಹಾಂತೇಶ ಪೂಜಾರಿ, ಆಫಿಸಾಬ್ ಹುಸೇನ್ ಬಾಷಾ, ಅಲೀಂ ಖಾಜಿ, ಖಾಜಾ ಹುಸೇನ್, ಜಗದೀಶ ಗಣಾಚಾರಿ, ಅಮರಸಿಂಗ್ ಸೇಠ್, ಮಹಿಬೂಬ್ ಟೈಲರ್ ಇದ್ದರು. 
ಜಿಲ್ಲೆ

ಹಿಂದು ಯುವಕರಿಂದ ಇಫ್ತಿಯಾರ್ ಆಯೋಜನೆ

ಅರಕೇರಾ: ರಂಜಾನ್ ಮಾಸಾಚರಣೆ ಹಿನ್ನೆಲೆಯಲ್ಲಿ ಪಟ್ಟಣದ ಜಾಮೀಯಾ ಮಸೀದಿಯಲ್ಲಿ ಹಿಂದು ಯುವಕರು ಮುಸ್ಲಿಮರಿಗೆ ಗುರುವಾರ ಇಫ್ತಿಯಾರ್ ಕೂಟ ಆಯೋಜಿಸುವ ಮೂಲಕ ಸಾಮರಸ್ಯ ಸಾರಿದರು. ಹಿಂದು ಹಾಗೂ ಮುಸ್ಲಿಂ ಸಮುದಾಯದರು ಕೇಸರಿ ಶಾಲುಗಳನ್ನು ಹಾಕಿಕೊಂಡು ಐಕ್ಯತೆ ಪ್ರದರ್ಶಿಸಿದರು.

ಗೆಳೆಯರ ಬಳಗದ ಮಹಾಂತೇಶ ಪೂಜಾರಿ ಮಾತನಾಡಿ, ಹಿಂದು ಹಾಗೂ ಮುಸ್ಲಿಮರ ನಡುವೆ ಬಾಂಧವ್ಯ ಬೆಳೆಸುವಲ್ಲಿ ಎಲ್ಲರೂ ಶ್ರಮಿಸಬೇಕು. ಎರಡೂ ಧರ್ಮಗಳ ಧಾರ್ಮಿಕ ಆಚರಣೆಗಳಲ್ಲಿ ಪರಸ್ಪರ ಭಾಗಿಯಾಗಬೇಕು. ಸಮಾಜದಲ್ಲಿ ಕೆಟ್ಟ ಸಂದೇಶವನ್ನು ಯಾರೂ ಬಿತ್ತಬಾರದು. ಕೆಟ್ಟ ಸಂದೇಶ ಮುಂದಿನ ಪೀಳಿಗೆಗೆ ಮಾರಕವಾಗಲಿದೆ. ಸಂಸ್ಕಾರವಂತ ಸಮಾಜಗಳು ನಿರ್ಮಾಣ ಆದಾಗ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.