ಜಿಲ್ಲೆ

ದಂತದ ಕಾಳಜಿ ತುಂಬಾ ಅಗತ್ಯ; ಬಿಜೆಪಿ ಮುಖಂಡ ಕೆ.ಅನಂತರಾಜ ನಾಯಕ ಅಭಿಮತ

ಹಲ್ಲಿನ ತಪಾಸಣೆ, ಚಿಕಿತ್ಸೆಯ ಉಚಿತ ಶಿಬಿರ

ಅರಕೇರಾ: ದಂತ ಆರೋಗ್ಯದ ಬಗ್ಗೆ ಪ್ರತಿಯೊಬ್ಬರಿಗೂ ಕಾಳಜಿ ಇರಬೇಕು ಎಂದು ಬಿಜೆಪಿ ಮುಖಂಡ ಕೆ.ಅನಂತರಾಜ ನಾಯಕ ಹೇಳಿದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಶುಕ್ರವಾರ ಏರ್ಪಡಿಸಿದ್ದ ರಾಷ್ಟ್ರೀಯ ಓರಲ್ ಹೆಲ್ತ್ ಪಾಲಿಸಿ ಹಾಗೂ ದಂತ ಆರೋಗ್ಯ ಕಾರ್ಯಕ್ರಮದಡಿ ಉಚಿತ ದಂತ ತಪಾಸಣೆ, ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು.

ಸ್ವಚ್ಛತೆ ಮರೆತರೆ ಸ್ವತಃ ರೋಗಗಳನ್ನು ಆಹ್ವಾನಿಸಿದಂತೆ. ಹಲ್ಲುಗಳ ಸ್ವಚ್ಛತೆ ಕಾಪಾಡಿಕೊಳ್ಳುವ ಜತೆಗೆ ಸೊಪ್ಪು, ತರಕಾರಿ, ಹಣ್ಣು, ರೊಟ್ಟಿಯಂತಹ ಖನಿಜಯುಕ್ತ ಆಹಾರ ಸೇವಿಸಬೇಕು. ಇದರಿಂದ ಹಲ್ಲುಗಳ ರಕ್ಷಣೆ ಆಗುತ್ತದೆ ಎಂದರು.

ದಂತ ವೈದ್ಯೆ ಶೀತಲ್ ಮಾತನಾಡಿ, ಯಾವುದೇ ಆಹಾರ ಪದಾರ್ಥ ಸೇವಿಸಿದ ಮೇಲೆ ನೀರಿನಿಂದ ಬಾಯಿ ಮುಕ್ಕಳಿಸಬೇಕು. ಹಲ್ಲು ಉಜ್ಜುವಾಗ ವಸಡಿನಲ್ಲಿ ರಕ್ತಸ್ರಾವವಾಗುತ್ತಿದ್ದರೆ ವೈದ್ಯರ ಸಲಹೆ ಪಡೆದುಕೊಳ್ಳಬೇಕು. ಬೆಳಗ್ಗೆ ಮತ್ತು ರಾತ್ರಿ ತಪ್ಪದೆ ಹಲ್ಲು ಉಜ್ಜಬೇಕು ಎಂದು ಸಲಹೆ ನೀಡಿದರು.

ಯುವ ಮುಖಂಡರಾದ ಕೆ.ಭಗವಂತ್ರಾಯ ನಾಯಕ, ರವಿನಾಯಕ, ಶ್ರೀಕಾಂತ ನಾಯಕ ಜಲ್ಲೆ, ವೆಂಕಟೇಶ ನಾಯಕ ಕರ್ನಾಳ, ಭೀಮಣ್ಣ ನಾಯಕ, ಇಮ್ರಾನ್‌ಖಾನ್ ಇತರರು ಇದ್ದರು.