ಜಿಲ್ಲೆ

ಆಲ್ಕೋಡ್‌ನಲ್ಲಿ ಪಿಎಚ್‌ಸಿ ಆರಂಭಿಸಿ

ಅರಕೇರಾ: ಆಲ್ಕೋಡ್ ಗ್ರಾಮಕ್ಕೆ ಮಂಜೂರಾಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತ್ವರಿತವಾಗಿ ಆರಂಭಿಸಬೇಕು ಎಂದು ಒತ್ತಾಯಿಸಿ ಗ್ರಾಪಂ ಅಧ್ಯಕ್ಷ ಮಹೇಶ ನಾಯಕ ಹಾಗೂ ಪ್ರಮುಖರು ಗುರುವಾರ ಕಲಬುರಗಿಯಲ್ಲಿ ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಆಲ್ಕೋಡ್ ಗ್ರಾಮ ಗಲಗ ಪಿಎಚ್‌ಸಿ ವ್ಯಾಪ್ತಿಗೆ ಒಳಪಡುತ್ತದೆ. ಅದು 15 ಕಿಮೀ ದೂರವಿದೆ. ಗ್ರಾಮಸ್ಥರು ಗಲಗ ಅಥವಾ ಅರಕೇರಾ ಆರೋಗ್ಯ ಕೇಂದ್ರಗಳಿಗೆ ತೆರಳಿ ಚಿಕಿತ್ಸೆ ಪಡೆಯಬೇಕಾಗಿದೆ. ಆದರೆ, ಸಾರಿಗೆ ವ್ಯವಸ್ಥೆ ಸರಿ ಇಲ್ಲದ ಕಾರಣ ಈ ಭಾಗದ ಜನರಿಗೆ ಸಮರ್ಪಕ ಆರೋಗ್ಯ ಸೇವೆ ಪಡೆಯಲು ಸಾಧ್ಯವಾಗುತ್ತಿಲ್ಲ. ತುರ್ತು ಸಂದರ್ಭದಲ್ಲಿ ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ತಿಳಿಸಿದರು.

ಸರ್ಕಾರದ ನಿಯಮದ ಪ್ರಕಾರ ಹತ್ತು ಸಾವಿರ ಜನಸಂಖ್ಯೆ ವ್ಯಾಪ್ತಿಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ, ಐದು ಸಾವಿರ ಜನಸಂಖ್ಯೆಗೆ ಒಂದು ಉಪಕೇಂದ್ರ ಇರಬೇಕು. ಆದರೆ ಗಲಗ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಸುಮಾರು 70 ಸಾವಿರ ಜನಸಂಖ್ಯೆ ವ್ಯಾಪ್ತಿ ಹೊಂದಿದೆ. ಈಗಾಗಲೇ ಆಲ್ಕೋಡ್ ಗ್ರಾಮಕ್ಕೆ 2022-23 ಸಾಲಿನ ಕೆಕೆಆರ್‌ಡಿಬಿ ಮ್ಯಾಕ್ರೋ ಯೋಜನೆಯಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರಾಗಿದೆ. ಅನುದಾನ ಬಿಡುಗಡೆ, ಟೆಂಡರ್ ಪ್ರಕ್ರಿಯೆ ವಿಳಂಬವಾಗಿದೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಆಲ್ಕೋಡ್‌ನಲ್ಲಿ ಈಗಿರುವ ಆಯುರ್ವೇದ ಆಸ್ಪತ್ರೆಯಲ್ಲಿ ತಾತ್ಕಾಲಿಕವಾಗಿ ಪಿಎಚ್‌ಸಿ ಆರಂಭಿಸಿ ಅಗತ್ಯ ವೈದ್ಯರು, ಸಿಬ್ಬಂದಿ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು. ಪ್ರಮುಖರಾದ ಬಾಲಪ್ಪ ನಾಯಕ ನಿಲವಂಜಿ, ಯಮನೂರಪ್ಪ ಬೊಮ್ಮನಾಳ ಇದ್ದರು.