ಅರಕೇರಾ : ಮಹಿಳೆಯರ ಸರ್ವತೋಮುಖ ಅಭಿವೃದ್ಧಿಯಲ್ಲಿ ಭಾಗವಹಿಸುವಿಕೆ ಮತ್ತು ತೆಗೆದುಕೊಳ್ಳುವ ನಿರ್ಣಯಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಆಲ್ಕೋಡ ಗ್ರಾಪಂ ಅಧ್ಯಕ್ಷ ಮಹೇಶ ನಾಯಕ ಹೇಳಿದರು.
ತಾಲೂಕಿನ ಆಲ್ಕೋಡ ಗ್ರಾಪಂ ಕಚೇರಿಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಮತ್ತು ಹೆಣ್ಣು ಮಕ್ಕಳ ಸ್ನೇಹಿ ಗ್ರಾಮ ಸಭೆ ಕಾರ್ಯಕ್ರಮ ಉದ್ಘಾಟಿಸಿ ಗುರುವಾರ ಮಾತನಾಡಿದರು.
ಮಹಿಳಾ ಸಶಕ್ತೀಕರಣ ಹಾಗೂ ಸ್ಥಳೀಯ ಆಡಳಿತದಲ್ಲಿ ಮಹಿಳೆಯರು ಸಕ್ರಿಯವಾಗಿ ಭಾಗವಹಿಸಬೇಕು. ಜಾಗತಿಕವಾಗಿ ಹಾಗೂ ನಮ್ಮ ದೇಶದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಪುರುಷರಷ್ಟೇ ಸಮಾನವಾಗಿ ಕಾರ್ಯ ನಿರ್ವಹಿಸುವುದನ್ನು ಕಾಣುತ್ತೇವೆ. ಸಾಂಸ್ಕೃತಿಕ, ಸಾಹಿತ್ಯ, ಕ್ರೀಡೆ ಮುಂತಾದ ಕ್ಷೇತ್ರಗಳಲ್ಲಿ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ ಎಂದರು.
ಪಿಡಿಒ ಮಂಜುನಾಥ ಯಾದವ್ ಮಾತನಾಡಿ, ಲಿಂಗ ಅಸಮಾನತೆ ನಿವಾರಣೆಗೆ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಮಹಿಳೆಯರ ಬೇಡಿಕೆ, ಸಮಸ್ಯೆ, ಪ್ರಶ್ನೆಗಳನ್ನು ಬರೆದು ಹಾಕಲು ಜನವಸತಿ ಪ್ರದೇಶಗಳಲ್ಲಿ ಸಲಹಾ ಪೆಟ್ಟಿಗೆ ತೆರೆಯಲಾಗಿದೆ. ಮಹಿಳೆಯರ ಹಕ್ಕುಗಳನ್ನು ಪ್ರತಿಪಾದಿಸಲು ಗ್ರಾಪಂ ಸಹಕಾರ ಮಾಡಲಿದೆ ಎಂದರು. ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಉತ್ತಮ ಪ್ರದರ್ಶನ ತೋರಿದವರಿಗೆ ನೆನಪಿನ ಕಾಣಿಕೆ ನೀಡಲಾಯಿತು.