ದೇವದರ್ಗುದಲ್ಲಿ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ರಾಮನಗೌಡಗೆ ಅರಕೇರಾ ತಾಲೂಕು ಕರವೇ ಕಾರ್ಯಕರ್ತರು ಮನವಿ ಸಲ್ಲಿಸಿದರು. ತಾಲೂಕು ಅಧ್ಯಕ್ಷ ರಂಗಣ್ಣ ಗಾಲಿ, ನಂದಪ್ಪ ಪಿ.ಮಡ್ಡಿ, ಗುರುನಾಥ ರೆಡ್ಡಿ ಎಂ, ಭೀಮಣ್ಣ ನಾಯಕ ಇತರರಿದ್ದರು. 
ಜಿಲ್ಲೆ

ಅರಕೇರಾ ಬಸ್ ನಿಲ್ದಾಣದಲ್ಲಿ ಅವ್ಯವಸ್ಥೆ ಸರಿಪಡಿಸಿ

ನರೇಶ್ ಕುಮಾರ್

ಅರಕೇರಾ: ಪಟ್ಟಣದ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ, ಅಗತ್ಯ ಸೌಲಭ್ಯ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರವೇ ತಾಲೂಕು ಘಟಕ ಮಂಗಳವಾರ ದೇವದುರ್ಗದಲ್ಲಿ ಕೆಕೆಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಮನಗೌಡಗೆ ಮನವಿ ಸಲ್ಲಿಸಿತು.

ತಾಲೂಕು ಅಧ್ಯಕ್ಷ ರಂಗಣ್ಣ ಗಾಲಿ ಮಾತನಾಡಿ, ನಿಲ್ದಾಣದಲ್ಲಿ ಆಸನಗಳ ಕೊರತೆ ಇರುವುದರಿಂದ ಪ್ರಯಾಣಿಕರು ನಿಲ್ಲಬೇಕಾದ ಪರಿಸ್ಥಿತಿ ಇದೆ. ಅಲ್ಲದೇ ಆಸನಗಳ ಆಜುಬಾಜು ಕೆಲವರು ಗುಟ್ಖಾ ತಿಂದು ಉಗುಳುತ್ತಿದ್ದಾರೆ. ಸಿಗರೇಟ್, ತಂಬಾಕು, ಗುಟ್ಖಾ, ವಾಟರ್ ಪೌಚ್‌ಗಳು ನಿಲ್ದಾಣದೆಲ್ಲೆಡೆ ಬಿದ್ದಿರುತ್ತವೆ ಎಂದು ದೂರಿದರು.

ಪುಂಡಪೋಕರಿಗಳ ಹಾವಳಿ ಹೆಚ್ಚಿದ್ದು, ಪ್ರಯಾಣಿಕರಿಗೆ ಅವರ ವಸ್ತುಗಳನ್ನು ಕಾಯ್ದುಕೊಳ್ಳಲು ತೊಂದರೆಯಾಗಿದೆ. ಸುತ್ತಲಿನ ಅಂಗಡಿಗಳ ಮಾಲೀಕರು ಕಸವನ್ನು ನಿಲ್ದಾಣದೊಳಗೆ ಸುರಿಯುತ್ತಿದ್ದಾರೆ. ಶೌಚಗೃಹ ದುಸ್ಥಿತಿಯಲ್ಲಿದೆ. ಇದರಿಂದ ಸ್ವಚ್ಛತೆ ಇಲ್ಲದಂತಾಗಿದೆ. ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿವ ನೀರಿನ ವ್ಯವಸ್ಥೆ ಮಾಡಬೇಕು. ಬಸ್ ಸಂಚರಿಸುವ ಮಾರ್ಗಗಳ ಬಗ್ಗೆ ನಾಮಫಲಕ ಅಳವಡಿಸಬೇಕು. ಕರೊನಾಕ್ಕೂ ಮುನ್ನ ಕಡಿತಗೊಳಿಸಿದ್ದ ಬಸ್‌ಗಳನ್ನು ಮತ್ತೆ ಆರಂಭಿಸಬೇಕು. ಅಲ್ಲದೇ ತಾಲೂಕು ಕೇಂದ್ರವಾಗಿರುವುದರಂದ ಪ್ರಮುಖ ಹಳ್ಳಿಗಳ್ಳಿಗೆ ಬಸ್‌ಗಳನ್ನು ಬಿಡಬೇಕು ಎಂದು ಒತ್ತಾಯಿಸಿದರು.

ಪದಾಧಿಕಾರಿಗಳಾದ ನಂದಪ್ಪ ಪಿ.ಮಡ್ಡಿ, ಗುರುನಾಥ ರೆಡ್ಡಿ ಎಂ, ಭೀಮಣ್ಣ ನಾಯಕ, ಸಾಬಣ್ಣ ಮದರಕಲ್, ಕೆಂಚಣ್ಣ, ಅಮರೇಶ, ಶಿವಕುಮಾರ, ಮುದ್ದಣ್ಣ ನಾಯಕ ಇದ್ದರು.