ಆಲ್ಕೋಡ ಗ್ರಾಮದಲ್ಲಿ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ಡಿವೈಎಸ್‌ಪಿ ದತ್ತಾತ್ರೇಯ ಕಾರ್ನಾಡ್ ಶುಕ್ರವಾರ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಮಹೇಶ ನಾಯಕ, ಪಿಐ ಗುಂಡೂರಾವ್, ಪಿಎಸ್‌ಐ ವೈಶಾಲಿ ಝಳಕಿ ಇದ್ದರು. 
ಜಿಲ್ಲೆ

ದೂರು ಸಲ್ಲಿಸಲು ಹೆದರುವ ಅಗತ್ಯವಿಲ್ಲ

ಅರಕೇರಾ: ಅಪರಾಧಗಳನ್ನು ತಡೆಯಬೇಕಾದರೆ ಪೊಲೀಸ್ ಇಲಾಖೆಯೊಂದಿಗೆ ಗ್ರಾಮಸ್ಥರ ಸಹಕಾರ ಅತ್ಯಗತ್ಯ. ಜನಸ್ನೇಹಿ ಆಡಳಿತ ನೀಡುವುದು ಆದ್ಯ ಕರ್ತವ್ಯವಾಗಿದೆ ಎಂದು ಡಿವೈಎಸ್‌ಪಿ ದತ್ತಾತ್ರೇಯ ಕಾರ್ನಾಡ್ ಹೇಳಿದರು.

ತಾಲೂಕಿನ ಆಲ್ಕೋಡ ಗ್ರಾಮದ ಗ್ರಾಪಂ ಕಚೇರಿ ಆವರಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಜನ ಸಂಪರ್ಕ ಸಭೆಯಲ್ಲಿ ಶುಕ್ರವಾರ ಮಾತನಾಡಿದರು. ಯಾವುದೇ ಸಮಸ್ಯೆ, ದೂರುಗಳಿದ್ದರೆ ನೇರವಾಗಿ ಠಾಣೆಗೆ ಬಂದು ಮಾಹಿತಿ ನೀಡಿ. ದೂರುಗಳನ್ನು ಆಲಿಸಲು ನಾವಿದ್ದೇವೆ. ಹೆದರುವ ಅಗತ್ಯವಿಲ್ಲ ಎಂದರು.

ಅಲ್ಪ ಸಮಯದಲ್ಲಿ ಅಧಿಕ ಹಣಗಳಿಸುವ ನಿಟ್ಟಿನಲ್ಲಿ ಜನರು ವಂಚನೆಗೆ ಒಳಗಾಗುತ್ತಿದ್ದಾರೆ. ಸೈಬರ್ ಕ್ರೈಂ ನಿಂದ ಮುಂಜಾಗ್ರತೆ ಇರಬೇಕು. ಅನೈತಿಕ, ಕಾನೂನು ಬಾಹಿರ ಚಟುವಟಿಕೆ, ಅಹಿತಕರ ಘಟನೆ ಸೇರಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ದೂರುಗಳನ್ನು ಇಲಾಖೆ ಗಮನಕ್ಕೆ ತರಬೇಕು. ಆಲ್ಕೋಡ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ತಯಾರಿಸಿದ ಬಿಸಿಯೂಟದ ಸಾಂಬರ್‌ನಲ್ಲಿ ವಿಷ ಕಲಬೆರಿಕೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ತಪ್ಪಿತಸ್ಥರು ಶಿಕ್ಷೆಗೆ ಗುರಿಯಾಗುತ್ತಾರೆ ಎಂದರು.

ಗ್ರಾಪಂ ಅಧ್ಯಕ್ಷ ಮಹೇಶ ನಾಯಕ ಮಾತನಾಡಿ, ಪರಿಶಿಷ್ಟ ಸಮುದಾಯದ ದುರ್ಬಲರು ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಅವರು ಶೋಷಣೆ, ದಬ್ಬಾಳಿಕೆ, ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ತಳ ವರ್ಗದ ಜನರಿಗೆ ಪೊಲೀಸ್ ಇಲಾಖೆ ಬೆನ್ನೆಲುಬಾಗಿ ನಿಲ್ಲಬೇಕು ಎಂದರು. ಪಿಐ ಗುಂಡೂರಾವ್, ಪಿಎಸ್‌ಐ ವೈಶಾಲಿ ಝಳಕಿ ಇದ್ದರು.