ಅರಕೇರಾ: ಆಲ್ಕೋಡ್ ಗ್ರಾಮಕ್ಕೆ ಮಂಜೂರಾದ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿ ಯಾವ ಕಾರಣಕ್ಕೆ ಗುತ್ತಿಗೆದಾರರು ನಿರ್ಮಿಸಲು ವಿಳಂಬ ಮಾಡುತ್ತಿದ್ದಾರೆಂದು ತಿಳಿಯುತ್ತಿಲ್ಲ ಎಂದು ಆಲ್ಕೋಡ್ ಗ್ರಾಪಂ ಅಧ್ಯಕ್ಷ ಮಹೇಶ ನಾಯಕ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, 1 ಎಕರೆ 32 ಗುಂಟೆಯಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ. ಜೂ.14ರಂದು ಸಿಎಂ ಸಿದ್ದರಾಮಯ್ಯ ಅವರು ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದ್ದರು. ಕಾಮಗಾರಿಗಳಲ್ಲಿ ಆಲ್ಕೋಡ ಪ್ರಾಥಮಿಕ ಆರೋಗ್ಯ ಕೇಂದ್ರವೂ ಒಳಗೊಂಡಿದೆ. ಕೆಕೆಆರ್‌ಡಿಬಿ ಮತ್ತು ಆರೋಗ್ಯ ಇಲಾಖೆ ಸಹಭಾಗಿತ್ವದ ಅನುದಾನದಲ್ಲಿ ಕಾಮಗಾರಿ ಮಾಡಬೇಕಿದೆ. ಆದರೆ ಇದುವರೆಗೂ ಕಾಮಗಾರಿಗೆ ಚಾಲನೆ ನೀಡಿಲ್ಲ ಎಂದು ದೂರಿದರು.
ಇದನ್ನೂ ಓದಿ: ಬಜಕೂಡ್ಲು ಸ್ಟೇಡಿಯಂಗೆ ಅನುದಾನ !: ಇಂದಿನಿಂದ ನವೀಕರಣ ಕಾಮಗಾರಿ ಶುರು : ಶಾಸಕ ಅಶ್ರಫ್, ಜಿ.ಎಸ್ ಸೋಮಶೇಖರ್ ಮುತುವರ್ಜಿ
ಬೆಂಗಳೂರು ಮೂಲದ ಬುಲ್ಟೆಕ್ ಇಂಜಿನಿಯರ್ ವರ್ಕ್ಸ್‌ಗೆ ಕಾಮಗಾರಿ ಟೆಂಡರ್ ಆಗಿದೆ. ಕಾಮಗಾರಿ ಪೂರ್ಣಗೊಳಿಸಲು ಸರ್ಕಾರ 15 ತಿಂಗಳು ಅವಧಿ ನೀಡಿದೆ. ನಿಗದಿತ ಅವಧಿಯೊಳಗಡೆ ಕಾಮಗಾರಿ ಮುಗಿಯುತ್ತಾ ಎಂಬ ಪ್ರಶ್ನೆ ಕಾಡುತ್ತಿದೆ. ಗುತ್ತಿಗೆದಾರರಿಗೆ ಸರ್ಕಾರ ನೀಡಿದ ಅವಧಿಗೆ ಪ್ರಾರಂಭಿಸದೇ ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಸುವ ಭರದಲ್ಲಿ ತರಾತುರಿ ಕಾಮಗಾರಿ ಕೈಗೊಳ್ಳುವ ಅನುಮಾನವಿದೆ. ಸಿಎಂ ಸಿದ್ದರಾಮಯ್ಯ ಶಿಲಾನ್ಯಾಸಗೊಳಿಸಿ ಟೆಂಡರ್ ಆಧಾರದ ಮೇಲೆ ತ್ವರಿತ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಆದರೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳನ್ನು ವಿಚಾರಿಸಿದರೆ ಸ್ಥಳೀಯ ಶಾಸಕರು ದಿನಾಂಕ ನಿಗದಿ ಮಾಡದೆ ನಾವು ಕಾಮಗಾರಿ ಆರಂಭಿಸಲು ಸಾಧ್ಯವಿಲ್ಲ. ಅಲ್ಲದೇ ಶಾಸಕರು ಅನುಮತಿ ಕೊಟ್ಟರೆ ಮಾತ್ರ ಕಾಮಗಾರಿ ಪ್ರಾರಂಭಿಸುತ್ತೇವೆ. ಇಲ್ಲದಿದ್ದರೆ ಶಿಷ್ಟಾಚಾರ ಉಲ್ಲಂಘನೆ ಆಗುತ್ತದೆ ಎಂದು ಹೇಳುತ್ತಿದ್ದಾರೆ. ಶಾಸಕರು ಯಾವ ಕಾರಣಕ್ಕೆ ಆಸ್ಪತ್ರೆ ಕಟ್ಟಡ ಕಾಮಗಾರಿಯನ್ನು ಆರಂಭ ಮಾಡುತ್ತಿಲ್ಲ ಎಂಬುದನ್ನು ಸಾರ್ವಜನಿಕರಿಗೆ ಉತ್ತರಿಸಬೇಕು ಎಂದು ಆಗ್ರಹಿಸಿದರು. ಗ್ರಾಪಂ ಮಾಜಿ ಸದಸ್ಯರಾದ ಸಾಬಣ್ಣ ಕಾವಲಿ, ತಾಯಪ್ಪ ಭಜಂತ್ರಿ, ಪ್ರಮುಖರಾದ ಶಿವರಾಜ, ರಂಗಪ್ಪ ಇತರರಿದ್ದರು.